ಸಮಾವೇಶ ಯಶಸ್ವಿಗೆ ಸಹಕರಿಸಿ, ವಿರೋಧಿಗಳ ಮಾತಿಗೆ ಕಿವಿಗೊಡಬೇಡಿ

ಚಿತ್ತಾಪುರ: ಫೆ.3:ಕಲಬುರಗಿ ಜಿಲ್ಲೆಯಲ್ಲಿ ಫೆಬ್ರವರಿ 25 ರಂದು ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ತ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ನೇತೃತ್ವದಲ್ಲಿ ಎನ್.ವಿ ಮೈದಾನದಲ್ಲಿ ಹಿಂದುಳಿದ ಕೋಲಿ ಸಮಾಜದ ವಿವಿಧ ಬೇಡಿಕೆಗಳ ಇಡೇರಿಕೆಗಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಕೋಲಿ ಸಮಾಜದ ಬೃಹತ್ ಸಮಾವೇಶ ಯಶಸ್ವಿಗೆ ಕೋಲಿ ಸಮಾಜದ ಎಲ್ಲ ಮುಖಂಡರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೈಜೋಡಿಸಬೇಕು ಎಂದು ಕೋಲಿ ಸಮಾಜದ ತಾಲೂಕು ಉಪಾಧ್ಯಕ್ಷ ಕಾಶಪ್ಪ ಡೋಣಗಾಂವ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ನಡೆಯುವ ಕೋಲಿ ಸಮಾಜದ ಬೃಹತ್ ಸಮಾವೇಶಕ್ಕೆ ಚಿತ್ತಾಪುರ ತಾಲೂಕಿನ ಕೆಲ ಕೋಲಿ ಸಮಾಜದ ಮುಖಂಡರು ಬಹಿಷ್ಕಾರ ಹಾಕುವ ಹೇಳಿಕೆ ನೀಡಿದ್ದಾರೆ ಅದು ಅವರ ವಯಕ್ತಿಕ ವಿಚಾರ ಇದು ಸಮಾಜದ ನಿರ್ಣಯವಲ್ಲ, ಕೆಲವರು ತಮ್ಮ ಸ್ವಹಿತಾಸಕ್ತಿ ಹಾಗೂ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಮಾವೇಶಕ್ಕೆ ವಿರೋಧ ಮಾಡುತ್ತಿದ್ದಾರೆ ಇಂತಹ ಹೇಳಿಕೆಗಳಿಗೆ ಸಮಾಜದವರು ಕಿವಿಗೊಡಬಾರದು. ಅಂದಿನ ಸಮಾವೇಶಕ್ಕೆ ಚಿತ್ತಾಪುರ ತಾಲೂಕಿನಿಂದ 25 ಸಾವಿರ ಜನರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ತ ಸದಸ್ಯರಾದ ಮೇಲೆ ತಿಪ್ಪಣ್ಣಪ್ಪ ಕಮಕನೂರ ಅವರು ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಸೇರಿಸುವ ವಿಷಯ ಕುರಿತು ಹಲವು ಬಾರಿ ಅಧಿವೇಶನದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ ಹೀಗಾಗಿ ಸಮಾಜದ ಸವಾರ್ಂಗೀಣ ಅಭಿವೃದ್ದಿಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಲು ಹಾಗೂ ಗಮನ ಸೆಳೆಯಲು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ ಇದಕ್ಕೆ ಎಲ್ಲರೂ ಬೆಂಬಲಿಸಬೇಕು ಅದನ್ನು ಬಿಟ್ಟು ವಿರೋಧ ಮಾಡುವುದು ಸರಿಯಲ್ಲ ಎಂದರು.

ಸಮಾಜದ ಸಮಾವೇಶ ಮಾಡುವವರಿಗೆ ಬೆಂಬಲ ನೀಡಿ ಇಲ್ಲವಾದರೆ ಸುಮ್ಮನಿರಿ ಅದನ್ನು ಬಿಟ್ಟು ಮುಗ್ದ ಜನರನ್ನು ಹಾದಿ ತಪ್ಪಿಸುವ ಹೇಳಿಕೆ ನೀಡಬೇಡಿ ಮತ್ತು ಬೆಳೆಯುತ್ತಿರುವ ನಾಯಕರ ಕಾಲು ಹಿಡಿದು ಎಳೆಯುವ ಚಾಳಿ ಬಿಟ್ಟುಬಿಡಿ. ಕಮಕನೂರ ಅವರು ತಮ್ಮ ಸ್ವಾರ್ಥಕ್ಕಾಗಿ ಸಮಾವೇಶ ಮಾಡುತ್ತಿಲ್ಲ ಅವರು ಈಗಾಗಲೇ ಎಂಎಲ್‍ಸಿ ಆಗಿದ್ದಾರೆ ಹೀಗಾಗಿ ಅವರಿಗೆ ಯಾವುದೇ ಸ್ವಾರ್ಥ ಇಲ್ಲ ಸಮಾಜಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದ ಸಮಾವೇಶ ಮಾಡಲು ನಿರ್ಣಯಿಸಿದ್ದಾರೆ, ವಿನಾಕಾರಣ ಚಿತ್ತಾಪುರ ಕೋಲಿ ಸಮಾಜದ ಕೆಲವು ಮುಖಂಡರು ಸಮಾಜದ ಜನರಲ್ಲಿ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಿ ಇಲ್ಲದಿದ್ದರೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಫೆ.25 ರಂದು ಭಾನುವಾರ ಇರುವುದರಿಂದ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸಮಾವೇಶಕ್ಕೆ ಬರಲು ಸಮ್ಮತಿ ಸೂಚಿಸಿದ್ದರಿಂದ ತಿಪ್ಪಣ್ಣಪ್ಪ ಕಮಕನೂರ ಅವರು ಸಮಾಜದ ಜನರಿಗೆ ಸಂದೇಶ ಮುಟ್ಟಲಿ ಎಂದು ಪತ್ರಿಕೆ ಹೇಳಿಕೆ ನೀಡಿದ್ದಾರೆ ಅಷ್ಟೇ. ಈ ವಾರದಲ್ಲಿ ಜಿಲ್ಲೆಯ ಸಮಸ್ಥ ಕೋಲಿ ಸಮಾಜದ ತಾಲೂಕು ಅಧ್ಯಕ್ಷರುಗಳನ್ನು ಹಾಗೂ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಭಾವಿ ಸಭೆ ಮಾಡಲಿದ್ದಾರೆ ಹೀಗಿರುವಾಗ ಸುಖಾಸುಮ್ಮನೆ ಸಮಾವೇಶದ ಹಾಗೂ ಕಮಕನೂರ ಅವರ ವಿರುದ್ದ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ರಾಜೇಶ ಹೋಳಿಕಟ್ಟಿ ಕೋಲಿ ಸಮಾಜದ ಯುವ ಮುಖಂಡರಾದ ಮಹೇಶ ಸಾತನೂರ, ಮಲ್ಲಿಕಾರ್ಜುನ ಅಲ್ಲೂರಕರ್, ಮಹಾದೇವ ಬೂನಿ, ದೇವಿಂದ್ರ ಹಾಸಬಾ, ಆನಂದ ಯರಗಲ್, ಭಾಗಣ್ಣ ಹಲಕಟ್ಟಿ, ಗೂಳಿ ಸಂತೋಷ ಮಳಬಾ, ಡಿಗ್ಗಿ, ಮಲ್ಲಿಕಾರ್ಜುನ ನಾಲವಾರ, ಮಲ್ಲಿಕಾರ್ಜುನ ಕಟ್ಟಿಮನಿ, ಬಸವರಾಜ ಮೈನಾಳಕರ್, ಸಾಬಣ್ಣ ಹೋಳಿಕಟ್ಟಿ, ಬಸವರಾಜ ತಳವಾರ, ಶರಣು ಅರಣಕಲ್, ಹಣಮಂತ ಕಮಕನೂರ ಇತರರು ಇದ್ದರು.