ಸಮಾರಂಭ, ಆಚರಣೆಯಲ್ಲಿ ನಿಯಂತ್ರಣ ಕ್ರಮಗಳು ಜಾರಿ

ಉಡುಪಿ, ಎ.೧೯- ಜಿಲ್ಲೆಯಲ್ಲೀಗ ಕೋವಿಡ್-೧೯ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಮಾರಂಭ ಹಾಗೂ ಆಚರಣೆಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೋವಿಡ್-೧೯ ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯ ಸರಕಾರದ ಹೊಸ ಆದೇಶದಂತೆ ಸೋಂಕು ಹರಡುವ ಅಪಾಯವನ್ನು ತಡೆಗಟ್ಟುವುದಕ್ಕಾಗಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಜನರ ಒಗ್ಗೂಡುವಿಕೆಗೆ ಈ ಕೆಳಕಂಡಂತೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಆಚರಣೆಗಳು, ಸಮಾರಂಭಗಳಿಗೆ ಸರಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿ ೩.೨೫ ಚ.ಮೀ. ಮಾನದಂಡವನ್ನು ಪಾಲಿಸುವುದು ಕಡ್ಡಾಯವಾಗಿದೆ. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ ೨೦೦ ಗರಿಷ್ಠ ಮಂದಿ ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ೧೦೦ ಮಂದಿ ಮೀರಬಾರದು.

ಜನ್ಮದಿನ ಹಾಗೂ ಇತರ ಆಚರಣೆಗಳಿಗೆ ಸಂಬಂಧಿಸಿದಂತೆ ತೆರೆದ ಪ್ರದೇಶದಲ್ಲಿ ೫೦ ಮಂದಿ ಮೀರದಂತೆ ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ೨೫ ಮಂದಿ ಮೀರಬಾರದು.

ನಿಧನ, ಶವಸಂಸ್ಕಾರದ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ ೫೦ ಮಂದಿ ಮೀರದಂತೆ ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ೨೫ ಮಂದಿ ಮೀರಬಾರದು. ಅದೇ ರೀತಿ ಅಂತ್ಯಕ್ರಿಯೆ ಸಂದರ್ಭದಲ್ಲಿ ೨೫ ಮಂದಿ ಮೀರಬಾರದು.

ಇತರೆ ಸಮಾರಂಭಗಳಿಗೆ ಸಂಬಂಧಿಸಿದಂತೆ ೫೦ ಮಂದಿ ಮೀರದಂತೆ, ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾತ್ರ ಅವಕಾಶ ಕಲ್ಪಿಸಬೇಕು. ಧಾರ್ಮಿಕ ಆಚರಣೆಗಳು ಹಾಗೂ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜಕೀಯ ಆಚರಣೆಗಳು ಮತ್ತು ಸಮಾರಂಭಗಳನ್ನು ತೆರೆದ ಪ್ರದೇಶದಲ್ಲಿ ನಡೆಸಲು ಅನುಮತಿ ನೀಡಲಾಗಿದ್ದು, ೨೦೦ ಮಂದಿ ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೇಲಿನ ಸಂದರ್ಭಗಳಲ್ಲಿ ಜನರು ಕಡ್ಡಾಯವಾಗಿ ಸರಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣ ಮಂಟಪ,

ಸಿನಿಮಾ ಮಂದಿರ, ಹಾಲ್‌ಗಳು ಮತ್ತು ಆಚರಣೆಗಾಗಿ ಜನ ಸೇರುವ ಇತ್ಯಾದಿ ಪ್ರದೇಶಗಳ ಉಸ್ತುವಾರಿ ಹೊಂದಿರುವವರು ಕಡ್ಡಾಯವಾಗಿ ಸ್ಯಾನಿಟೈಝೇಷನ್ ಕ್ರಮಗಳನ್ನು ಅನುಸರಿಸಬೇಕು. ಈ ಎಲ್ಲಾ ಅಂಶಗಳನ್ನು ಪಾಲಿಸುವ ಷರತ್ತಿನ ಮೇರೆಗೆ ಕೋವಿಡ್-೧೯ ನಿಯಮಾವಳಿಗಳನ್ನು ಅನುಸರಿಸಿ ತಮ್ಮ ವ್ಯಾಪ್ತಿಯ ಸಮಾರಂಭಗಳು ಮತ್ತು ಆಚರಣೆಗಳಿಗೆ ಅನುಮತಿ ನೀಡುವ ಬಗ್ಗೆ ಆಯಾ ತಾಲೂಕಿನ ತಹಶೀಲ್ದಾರರುಗಳು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.