ಸಮಾನ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಉಳಿಸಲು ಪಣ

ಕೋಲಾರ,ಜೂ,೧೭:ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಸಮಾಜ ಮತ್ತು ಸಂಸ್ಥೆಗಳು ಕೈಜೋಡಿಸಬೇಕು, ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಪೋಷಕರು ಪಣ ತೊಡಬೇಕು ಎಂದು ಶಾಹಿ ಎಕ್ಸ್‌ಪೋಟ್ಸ್ ಸಂಸ್ಥೆಯ ನಿವೃತ್ತ ಜನರಲ್ ಮ್ಯಾನೇಜರ್ ಎಲ್.ರಘುರಾಜ್ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ತಮ್ಮ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ನೋಟ್‌ಪುಸ್ತಕಗಳು, ಗಣಿತ ಕಲಿಕೆಗೆ ಅನುಕೂಲವಾಗಲು ಜಾಮಿಟ್ರಿ ಬಾಕ್ಸ್‌ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ದೇಶ ಕಂಡ ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದ ಅವರು, ಕೀಳಿರಿಮೆ ತೊರೆದು ಮಕ್ಕಳನ್ನು ಇಲ್ಲಿ ದಾಖಲಿಸುವ ಮೂಲಕ ಸಮಾನ ಶಿಕ್ಷಣಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಹೊಣೆ ಪೋಷಕರು,ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಅರಾಭಿಕೊತ್ತನೂರು ಶಾಲೆ ಆವರಣದಲ್ಲಿ ಧನಾತ್ಮಕ ಶಕ್ತಿಯ ಸಂಚಲನವಾಗುತ್ತಿದೆ, ಇಲ್ಲಿನ ಪರಿಸರ,ಬೆಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲು ಕಲಿಕೆಗೆ ಹೇಳಿ ಮಾಡಿಸಿದಂತಿದೆ, ಈ ವಾತಾವರಣದಲ್ಲಿ ಮಕ್ಕಳು ಕಲಿತರೆ ಸಾಧಕರಾಗುವುದರಲ್ಲಿ ಸಂಶಯವಿಲ್ಲ ಎಂದರು.ಶಾಲೆಗೆ ಬರುವ ಮಕ್ಕಳು ಶಿಸ್ತು ರೂಢಿಸಿಕೊಳ್ಳಿ,ಪರಸ್ಪರ ದ್ವೇಷ,ಅಸೂಯೆ ತೊರೆದು ಎಲ್ಲರೂ ಸ್ನೇಹಿತರಂತೆ ಇರಬೇಕು, ಜಾತಿ,ಧರ್ಮದ ಎಲ್ಲೆ ಮೀರಿ ನಾವೆಲ್ಲಾ ಒಂದೇ ಎಂಬ ಪವಿತ್ರ ಭಾವನೆಯೊಂದಿಗೆ ಉತ್ತಮ ಸ್ನೇಹಿತರಾಗಿ ಕಲಿಕೆಯ ಧ್ಯೇಯ,ಗುರಿ ಸಾಧನೆಗೆ ಮುನ್ನಡಿ ಬರೆಯಬೇಕು,ಮೊಬೈಲ್,ಟಿವಿ ಅಗತ್ಯಕ್ಕಿಂತ ಹೆಚ್ಚು ಬಳಸದಿರಿ, ಅವುಗಳ ದಾಸರಾಗದಿರಿ ಎಂದು ಕಿವಿಮಾತು ಹೇಳಿದರು.
ಶಿಕ್ಷಕ ಶ್ರೀನಿವಾಸಲು ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿ, ರಘುರಾಜ್ ಅವರು ಈ ಶಾಲೆಯ ಕುಟುಂಬ ಸದಸ್ಯರಾಗಿದ್ದಾರೆ, ನಾವು ಕೇಳದಿದ್ದರೂ ಪ್ರತಿವರ್ಷ ಅವರೇ ಮುತುವರ್ಜಿ ವಹಿಸಿ ನಮ್ಮ ಮಕ್ಕಳಿಗೆ ಇಷ್ಟೊಂದು ಅಪಾರ ಪ್ರಮಾಣದ ನೆರವು ಹರಿಸುತ್ತಿರುವುದು ಶ್ಲಾಘನೀಯವಾಗಿದ್ದು, ಅವರಿಗೆ ಶಿಕ್ಷಕರು, ಪೋಷಕರು,ವಿದ್ಯಾರ್ಥಿಗಳು ಋಣಿಯಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಶ್ರೀನಿವಾಸಾಚಾರ್, ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ಸುಗುಣಾ, ಶ್ವೇತಾ,ವೆಂಕಟರೆಡ್ಡಿ, ಫರೀದಾ, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.