ಸಮಾನತೆ ಹರಿಕಾರ : ವಿಶ್ವಗುರು ಬಸವಣ್ಣ

ಔರಾದ :ಮೇ.1: ಎಲ್ಲಕ್ಕಿಂತ ಮಿಗಿಲಾಗಿ ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ, ಸಮಾಜ ಸುಧಾರಕರು ‘ಜಗಜ್ಯೋತಿ’ ಎನಿಸಿದ ಬಸವಣ್ಣನವರು ಎಂದು ಶಿವಶರಣಪ್ಪ ಪಾಟೀಲ ಹುಗ್ಗೆ ತಿಳಿಸಿದರು.

ಪಟ್ಟಣದ ಕೇದಾರೇಶ್ವರ ಮಂದಿರದ ಹತ್ತಿರದಲ್ಲಿರುವ ಬಸವ ಮಂಟಪದಲ್ಲಿ ನಡೆದ ವಿಶ್ವಗುರು ಬಸವಣ್ಣನವರ 890ನೇ ಜಯಂತೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು ಜಗಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುವಂತಹವು.. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಜಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಆಚಾರ, ವಿಚಾರಗಳಿಂದ ಮೇಲು-ಕೀಳು ಎಂಬ ಭಾವನೆಗಳಿಂದ ಸ್ತ್ರೀ-ಪುರುಷ ಎಂಬ ಲಿಂಗಭೇದದ ತಾರತಮ್ಯದಿಂದ ಶ್ರೀಮಂತ-ಬಡವ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ಧ ತಮ್ಮ ವಿಶಿಷ್ಟವಾದ ಮಾನವೀಯ ಮೌಲ್ಯಗಳ ಆಧಾರದ ಮೇರೆಗೆ, ನೈತಿಕ ಸೂತ್ರಗಳ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ ಸಾಮಾಜಿಕ ಹೋರಾಟದ ಹರಿಕಾರರು ವಿಶ್ವಗುರು ಬಸವಣ್ಣನವರು ಸಮ ಸಮಾಜ ನಿರ್ಮಾಣ ಮಾಡಿ ಸಮಾನತೆ ಹರಿಕಾರರಾಗಿದ್ದಾರೆ.

ಬಸವಣ್ಣನವರ ದೃಷ್ಟಿಯಲ್ಲಿ ದಯೆ ಕೇವಲ ಮಾನವ ಕುಲಕ್ಕೆ ಮಾತ್ರ ಸೀಮಿತವಲ್ಲ. ಪ್ರಾಣಿ ಸಂಕುಲಕ್ಕೂ ದಯೆಯ, ಪ್ರೀತಿಯ ಅಗತ್ಯತೆಯನ್ನು ಒತ್ತಿ ಹೇಳಿದ ದಯಾನಿಧಿ ಬಸವಣ್ಣನವರು. ಜಾತ್ಯತೀತ ಸಮಾಜದ ಕಲ್ಪನೆ:

ಶರಣರ ದೃಷ್ಟಿಯಲ್ಲಿ ಜಾತಿಗೆ ಸ್ಥಾನವೇ ಇಲ್ಲ. ಬಸವಣ್ಣನವರು ಕಂಡದ್ದು ಜಾತ್ಯತೀತವಾದ ಸುಂದರ ಸಮಾನತೆಯ ವಿಶ್ವಭ್ರಾತೃತ್ವದ ಸಮ ಸಮಾಜ. ಜಾತಿ-ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷದ ವಿರುದ್ಧ ಸಿಡಿದೆದ್ದ ಅವರು, ಎಲ್ಲರೂ ನಮ್ಮವರೆ ಎಂಬ ಸಂದೇಶ ಸಾರುವ ಈ ವಚನ ಇಡೀ ವಿಶ್ವಕ್ಕೆ ನೀಡಿದ ಒಂದು ದಿವ್ಯ ಸಂದೇಶವಾಗಿದೆ. ಬಸವಣ್ಣನವರು ಧರ್ಮಕ್ಕೆ ವೈಚಾರಿಕತೆಯ ವಿವೇಕದ ಸ್ಪರ್ಶ ನೀಡಿದವರು. ಅಂಧ ಶ್ರದ್ಧೆ ಅಂಧಾನುಕರುಣೆ, ಮೂಢನಂಬಿಕೆಗಳ ವಿರುದ್ಧ ಅವರು ನಡೆಸಿದ ಸಾಮಾಜಿಕ ಹೋರಾಟ ವಿನೂತನವಾದುದು. ಹೋಮ, ಪೂಜೆ, ಜ್ಯೋತಿಷ್ಯ, ಶುಭಕಾಲ, ಅಶುಭಕಾಲ, ವಾರ, ತಿಥಿ ಮುಂತಾದ ಹೆಸರಿನಲ್ಲಿ ಪುರೋಹಿತಶಾಹಿ ವರ್ಗದಿಂದ ಮುಗ್ಧರ ಮೇಲೆ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಚಾಟಿ ಬೀಸಿದವರು ಪುರಾಣ ವೇದಕ್ಕೆ ಸವಾಲು ಹಾಕಿ ವೈಚಾರಿಕ ಚಿಂತನೆ, ದಾಸೋಹ ತತ್ವ ಸ್ತ್ರೀ ಸಮಾನತೆ, ಕಾಯಕ ಸಿದ್ದಾಂತ, ನೀಡಿದರು ಬಸವಣ್ಣನವರ ಕ್ರಾಂತಿ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳಿಗೂ ಸಂಭಂದಿಸಿದ ಸಮಗ್ರ ಕ್ರಾಂತಿಯಾಗಿದೆ ಬಸವಣ್ಣನವರ ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡು ಬದುಕಬೇಕು ಎಂದು ತಿಳಿಸಿದರು.

ಬಸವ ಜಯಂತಿ ಉತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು ಆಶಿರ್ವಚನ ನೀಡಿ ವಿಶ್ವಗುರು ಬಸವಣ್ಣನವರ ವೈಚಾರಿಕ ಕ್ರಾಂತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ, ಧರ್ಮಗಳ ಸರ್ವ ಶ್ರೇಷ್ಠ ಧರ್ಮ ಬಸವಣ್ಣ ಕಟ್ಟಿದ ಲಿಂಗಾಯತ ಧರ್ಮ ತಾನ್ನಲ್ಲದೆ ತನ್ನವರಿಗೂ ಸಮಾನ ದೃಷ್ಟಿಯಲ್ಲಿ ಬೆಳೆಸಿ ಬಸವಾದಿ ಶರಣರಿಗೂ ಸಮಾನ ಗುರುವಿನ ಪಟ್ಟ ನೀಡಿದವರು, ಅವರ ತತ್ವ ಸಿದ್ಧಾಂತಗಳನ್ನು ನಾವು ಮೈಗೂಡಿಸಿಕೊಂಡಾಗ ಮಾತ್ರ ಬಸವ ಜಯಂತಿ ಆಚರಣೆ ಮಾಡಿದಕ್ಕೆ ಸಾರ್ಥಕ ಎಂದು ತಿಳಿಸಿದರು. ಔರಾದನಲ್ಲಿ ಈ ರೀತಿ ಸರಳವಾಗಿ ರಾಜಕೀಯ ರಹಿತ ಜಾತ್ಯತೀತವಾಗಿ ನಡೆಸಿದ ಬಸವ ಜಯಂತಿ ಉತ್ಸವ ಇಡೀ ಅನುಕೂಲಕ್ಕೆ ಪ್ರೇರಣೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕಲ್ಲಪ್ಪ ಉಪ್ಪೆ, ಅಧ್ಯಕ್ಷ ಧನರಾಜ ರಾಗಾ, ಪ್ರಕಾಶ ಘೂಳೆ, ಶರಣಪ್ಪ ಪಂಚಾಕ್ಷರಿ, ಡಾ. ವೈಜಿನಾಥ ಬುಟ್ಟೆ, ಅಡವೆಪ್ಪ ಪಟ್ನೆ, ಅಮೃತರಾವ ಬಿರಾದಾರ, ಲಿಂಗಾಯತ ಸಮಾಜ ಯುವಕ ಸಂಘದ ಅಧ್ಯಕ್ಷ ವೀರೇಶ ಅಲ್ಮಾಜೆ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ದ್ಯಾಡೆ, ಶರಣಪ್ಪ ಪಾಟೀಲ, ವಿರೇಂದ್ರ ಮೀಸೆ, ಸಂಗಮೇಶ ದ್ಯಾಡೆ, ಕರವೇ ಅಧ್ಯಕ್ಷ ಅನಿಲ ಬೆಲೂರೆ, ಸೇರಿದಂತೆ ಬಸವ ಅಭಿಮಾನಿಗಳು ಪಾಲ್ಗೊಂಡಿದ್ದರು.


ಮಳೆಯಲ್ಲಿ ಕೂಡ ಬಸವ ಜಯಂತಿ ಉತ್ಸವ ಮೆರವಣಿಗೆ :
ಪಟ್ಟಣದಲ್ಲಿ ಆಯೋಜಿಸಿದ್ದ ಬಸವಣ್ಣನವರ 890ನೇ ಜಯಂತಿ ಉತ್ಸವ ಅಂಗವಾಗಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಪಟ್ಟಣದ ಡಾ.ಚನ್ನಬಸವ ಪಟ್ಟದೇವರ ವೃತ್ತ, ಕನ್ನಡಾಂಬೆ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಮೂಲಕ ಬಸವ ಮಂಟಪ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಮೆರಗು ನೀಡಿದವು. ಮಳೆಯಲ್ಲಿ ಕೂಡ ಬಸವ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.