ಸಮಾನತೆ, ಸಹೋದರತ್ವ ಪ್ರತಿಪಾದಿಸಿದವರು ಡಾ.ಅಂಬೇಡ್ಕರ್‍ರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೀದರ: ಡಿ.6:ನಾಡಿನ ಮುಕುಟಪ್ರಾಯ, ಗಡಿ ಜಿಲ್ಲೆ, ಬೀದರ್‍ನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂವಿಧಾನ ಶಿಲ್ಪಿ, ವಿಶ್ವರತ್ನ, ಬೋಧಿಸತ್ವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್‍ರ ಪುತ್ತಳಿಗೆ ಮಾಲಾರ್ಪಣೆ ಮಾಡಿ, ನುಡಿನಮನ ಸಲ್ಲಿಸಿದರು.

ಇಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ದಲಿತ ಸಂಘಟನೆಗಳ ಒಕ್ಕೂಟ, ಭಾರತೀಯ ಬೌದ್ದ ಮಹಾಸಭೆ, ಜಿಲ್ಲಾ ಸೈನಿಕ ದಳ ಸೇರಿದಂತೆ ಇತರೆ ಸಂಘಟನೆಗಳಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು, ಬೀದರ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಅಂಬೇಡ್ಕರ್‍ರು ಭಾರತದ ಸಂವಿಧಾನ ರಚಿಸಿ ನಮ್ಮೇಲ್ಲರಿಗೆ ಸಮಾನತೆ ಹಾಗೂ ಭ್ರಾತೃತ್ವ ಪ್ರತಿಪಾದಿಸಿದರು. ಆನ ಸಾಮಾನ್ಯರು ಸಹ ಇಂದು ಉನ್ನತ ಸ್ಥಾನಕ್ಕೇರಲು ಅಂಬೇಡ್ಕರ್‍ರು ರಚಿಸಿದ ಈ ವಿಶಾಲ ಸಂವಿಧಾನದಿಂದಲೇ ಸಾಧ್ಯವಾಗಿದೆ. ಅಂಬೇಡ್ಕರ್‍ರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದಿದ್ದರೆ ನಾವೆಲ್ಲ ಅನಾಗರಿಕರಾಗಿ ಬದುಕಬೇಕಿತ್ತು. ಅವರು ಸಾರಿದ ಮಾರ್ಗಸೂಚಿ ಇಂದು ಇಡೀ ವಿಶ್ವ ಪರಿಪಾಲಿಸುತ್ತಿದೆ. ಅದಕ್ಕಾಗಿ ನಾವು ಹೆಮ್ಮೆ ಪಡಬೇಕು ಎಂದರು.

ಮಹಾತ್ಮಾ ಗಾಂಧಿಜಿ ಈ ದೇಶಕ್ಕೆ ಸ್ವತಂತ್ರ ದೊರಕಿಸಿ ರಾಷ್ಟ್ರಪಿತಾ ಎನಿಸಿದರೆ, ಶ್ರೇಷ್ಠ ಸಂವಿಧಾನ ನೀಡಿ ಅಂಬೇಡ್ಕರ್‍ರು ಸಹ ರಾಷ್ಟ್ರಪಿತಾ ಆಗಿದ್ದಾರೆ. ಅವರ ತತ್ವ ಪರಿಪಾಲನೆ ಮಾಡುವ ಮೂಲಕ ಅವರಿಗೆ ನಿಜವಾದ ಗೌರವ ನೀಡೋಣ ಎಂದು ಮುಖ್ಯಮಂತ್ರಿಗಳು ಹೇಳಿದರು.

ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಮಾತನಾಡಿ, ನಾವು ಹೇಗೆ ಹುಟ್ಟಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕುತ್ತೇವೆ ಎಂಬುದು ಬಹಳ ಮುಖ್ಯ. ನಮ್ಮ ಮಹಾತ್ಮರು ಆದರ್ಶರಾಗಿ ಬದುಕಿದ ಕಾರಣ ನಾವಿಂದು ಅವರ ಜಯಂತಿ, ಪುಣ್ಯಸ್ಮರಣೆ ಆಚರಿಸುತ್ತಿದ್ದೇವೆ ಎಂದರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಒಂದು ಕಾಲದಲ್ಲಿ ವಿದ್ಯುತ್, ನೀರು, ರಸ್ತೆ ಇಲ್ಲದ ಸಮಯದಲ್ಲಿ ಅಂಬೇಡ್ಕರ್‍ರು ವಿದೇಶಕ್ಕೆ ಹೋಗಿ, ಉನ್ನತ ವ್ಯಾಸಾಂಗ ಮಾಡಿ, ದೇಶಕ್ಕೆ ಶ್ರೇಷ್ಠ ಸಂವಿಧಾನ ಸಮರ್ಪಿಸಿ ಜಗತ್ಪ್ರಸಿದ್ದಿಯಾಗಿದ್ದಾರೆ. ನಾವಿ ಅವರ ತತ್ವ ಪರಿಪಾಲನೆ ಮಾಡಿ ನಿಜವಾದ ಅನುಯಾಯಿಗಳಾಗೋಣ ಎಂದರು.

ಸ್ಥಳಿಯ ಶಾಸಕ ರಹಿಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ರಘುನಾಥರಾವ ಮಲ್ಕಾಪುರೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹಿರಾ ನಸಿಮ್, ಅಣದೂರ ವೈಶಾಲಿನಗರ ಬೌದ್ದ ಗುರು ಧಮ್ಮಾನಂದರು ಮಾತನಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ರಾಜ್ಯ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಮುಖರಾದ ಗುರುನಾಥ ಕೊಳ್ಳುರ್, ಸಿದ್ದು ಪಾಟೀಲ, ಬಸವರಾಜ ಆರ್ಯ, ಜಯಕುಮಾರ ಕಾಂಗೆ, ಅರಹಂತ ಸಾವಳೆ, ಲುಂಬಿಣಿ ಗೌತಮ, ಶಿವರಾಜ ಕುದ್ರೆ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ರೀಪತರಾವ ದಿನೆ ಸೇರಿದಂತೆ ನೂರಾರು ದಲಿತ ಸಮಾಜದ ಮುಖಂಡರು, ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ದಲಿತ ಸಂರಕ್ಷಣಾ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಸಂವಿಧಾನದ ಪೀಠಿಕೆ ಸಮರ್ಪಿಸಲಾಯಿತು. ಸಮತಾ ಸೈನಿಕ ದಳದ ಸೈನಿಕರಿಂದ ಅಂಬೇಡ್ಕರ್‍ರಿಗೆ ಸಲಾಮಿ ನೀಡಲ;ಆಯಿತು. ಮಾನವಂದನೆ ಸಹ ಸಲ್ಲಿಸಲಾಯಿತು. ಬೌದ್ಧ ಭಿಕ್ಕುಗಳು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಅನಿಲಕುಮಾರ ಬೆಲ್ದಾರ್ ಸ್ವಾಗತಿಸಿ, ವಿಜಯಕುಮಾರ ಸೋನಾರೆ ಕಾರ್ಯಕ್ರಮ ನಿರೂಪಿಸಿದರು.