ಸಮಾನತೆಯ ಸುಂದರ ಸಮಾಜದ ನಿರ್ಮಾಣದ ಕನಸು ಕಂಡವರು ಶರಣರು:ಸತ್ಯಂಪೇಟೆ

ಶಹಾಬಾದ:ನ.19:ಅಕ್ಕನಿಗಿಲ್ಲದ ಜನಿವಾರ ನನಗೇಕೆ ಎಂದು ತಿರಸ್ಕರಿಸಿ ಸಾಮಾಜಿಕ ಸಮಾನತೆ ಕನಸನ್ನು ಕಂಡಂತವರು ಬಸವಣ್ಣನವರು ಎಂದು ಶರಣ ಮಾರ್ಗದ ಸಂಪಾದಕ ಡಾ.ಶಿವರಂಜನ್ ಸತ್ಯಂಪೇಟೆ ಹೇಳಿದರು.

ಅವರು ಗುರುವಾರ ಭಂಕೂರಿನ ಬಸವ ಸಮಿತಿಯಲ್ಲಿ ಬುತ್ತಿ ಬಸವಲಿಂಗ ಪ್ರತಿಷ್ಠಾಪನದ ಬೆಳ್ಳಿ ಮಹೋತ್ಸವದ ಪ್ರಯುಕ್ತ ವಚನ ಸಾಹಿತ್ಯದಲ್ಲಿ ಆಧ್ಯಾತ್ಮ ಚಿಂತನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಶರಣ ಸಂಸ್ಕøತಿಯ ಮೂಲ ಆಶಯ ಸಮಾನತೆಯ ಸುಂದರ ಕಲ್ಯಾಣ ಸಮಾಜದ ನಿರ್ಮಾಣ. ಅಲ್ಲಿ ವರ್ಗಬೇಧವಿಲ್ಲ, ವರ್ಣಬೇಧವಿಲ್ಲ, ಮೇಲು-ಕೀಳು, ಜಾತಿಬೇಧವಿಲ್ಲ, ತಾರತಮ್ಯವಿಲ್ಲದೇ ದಯೆಯೇ ಧರ್ಮದ ಮೂಲವಾಗಿರುವ ಧರ್ಮಗಳಲ್ಲಿ ಬೇಧಗಳೇ ಇಲ್ಲ. ಮಾನವ ಸಮುದಾಯವನ್ನು ಎಲ್ಲಾ ಅನಿಷ್ಟಗಳಿಂದ ಮುಕ್ತಗೊಳಿಸಿ ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವುದೇ ಶರಣರ ಗುರಿಯಾಗಿತ್ತು.

ಬಸವ ಎಂಬುದೇ ಶಕ್ತಿ.ಬಸವಾಕ್ಷರವೇ ಮೂಲಮಂತ್ರ. ಇಂದಿಗೂ ಕುಂತರು ಬಸವ, ನಿಂತರೂ ಬಸವ, ಬಿದ್ದರೂ ಬಸವ ಎಂಬ ಶಬ್ಧವನ್ನು ಉಚ್ಚರಿಸುತ್ತೆವೆ.ಕಾರಣ ಬಸವಾಕ್ಷರದಲ್ಲಿ ಕಷ್ಟಗಳನ್ನು ದೂರ ಮಾಡುವ ಶಕ್ತಿಯಿದೆ.ಆತ ಯುದಯುಗದ ಉತ್ಸಾಹ.ಪುರುಷ ಪ್ರಧಾನವಾದ ಸಮಾಜದಲ್ಲಿ ಸ್ತ್ರೀಯರಿಗೂ ಸ್ಥಾನಮಾನ ಕೊಟ್ಟಂತವರು ಶರಣರು. ಕಸಗೂಡಿಸುವ ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಹೆಂಡದ ಮಾರಯ್ಯ,ಲದ್ದೆ ಸೋಮಣ್ಣ, ವೈಧ್ಯ ಸಂಗಣ್ಣ ಸೇರಿದಂತೆ ಎಲ್ಲಾ ಶರಣರಿಗೆ ಅಕ್ಷರ ಜ್ಞಾನ ನೀಡಿದಾತ ಬಸವಣ್ಣ.ಎಲ್ಲರನ್ನು ಅಪ್ಪಿಕೊಂಡು ಅನುಭವ ಮಂಟಪದಲ್ಲಿ ಅನುಭಾವ ಗೋಷ್ಠಿಗಳನ್ನು ನಡೆಸುವ ಪರಿ ಮಾತ್ರ ರೋಮಾಂಚನ.ವಚನ ಸಾಹಿತ್ಯದ ಉಗಮಸ್ಥಾನವೇ ಅನುಭವ ಮಂಟಪ. ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್‍ನಲ್ಲಿ ಲಿಂಗಬೇಧವಿಲ್ಲದೆ, ವರ್ಣಬೇಧವಿಲ್ಲದೆ ಎಲ್ಲ ಶರಣರು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಇತರರ ವಿಚಾರಗಳನ್ನು ಹಂಚಿಕೊಳ್ಳುವ ಒಂದು ವಿಚಾರ ದಾಸೋಹದ ಕೇಂದ್ರವಾಯಿತು ಅನುಭವಮಂಟಪ ಎಂದು ಹೇಳಿದರು.

ಶಿರಗುಪ್ಪಾದ ಬಸವ ತತ್ವ ಚಿಂತಕ ಬಸವರಾಜ ವೆಂಕಾಟಾಪೂರ ಶರಣರು ಮಾತನಾಡಿ, ಜಗತ್ತಿನಲ್ಲಿ ಇರುವುದು ಎರಡು ಸಂಗಗಳು.ಒಂದು ಸಜ್ಜನರ ಸಂಗ.ಇನ್ನೊಂದು ದುರ್ಜನರ ಸಂಗ. ಸಜ್ಜನರ ಸಂಗದಲ್ಲಿ ಪ್ರಾಮಾಣಿಕತೆ,ಸತ್ಯ ಪ್ರತಿಪಾದನೆ, ಸದ್ಭಾವನೆ ಕಾಣುತ್ತೆವೆ.ಅಲ್ಲದೇ ಅವರ ಸಂಗದಿಂದ ಬದುಕಿನಲ್ಲಿ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬಹುದು. ಆದರೆ ದರ್ಜನರ ಸಂಗದಲ್ಲಿ ಸುಳ್ಳು,ಕಪಟ, ವಂಚನೆಗಳು ತುಂಬಿಕೊಂಡಿರುತ್ತವೆ.ಅವರ ಸಂಗದಿಂದ ಬದುಕಿನಲ್ಲಿ ಕತ್ತಲೆ ಆವರಿಸುತ್ತದೆ.ಬದುಕಿನ ಪ್ರತಿಯೊಂದು ಕ್ಷಣದಲ್ಲಿ ಸಂಗಗಳು ಎದುರಾಗುತ್ತವೆ.ಅದರಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವಂತೆ ಹೊಂದಾಣಿಕೆಯಿಂದ ಸುಂದರ ಬದುಕನ್ನು ಕಟ್ಟಿಕೊಳ್ಳುವ ಸನ್ಮಾರ್ಗವನ್ನು ಶರಣರು ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ ಠಾಕೂರ, ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಮಾತನಾಡಿದರು. ಉದ್ದಿಮೆದಾರರಾದ ಶಶಿಕಾಂತ ಪಾಟೀಲ, ಗುತ್ತಿಗೆದಾರ ಚೆನ್ನಬಸಪ್ಪ ಬಾಗಲೆ ನಂದಿ ನಾಗೂರ ವೇದಿಕೆಯ ಮೇಲಿದ್ದರು.

ಇದೇ ಸಂದರ್ಭದಲ್ಲಿ ಸಿದ್ಧಾರ್ಥ ಚಿಮ್ಮಯಿದಲಾಯಿ ಸಂಗಡಿಗರಿಂದ ವಚನ ಸಂಗೀತ ಸೇವೆ ನಡೆಯಿತು.

ಅಮೃತ ಮಾನಕರ್ ನಿರೂಪಿಸಿದರು, ಶರಣಬಸಪ್ಪ ನಾಗನಳ್ಳಿ ಸ್ವಾಗತಿಸಿದರು, ಶಿವರಾಜ ಹಡಪದ ವಂದಿಸಿದರು.