ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ದಾಸಿಮಯ್ಯ

ಕಲಬುರಗಿ: ಮಾ.26:ದೇವರ ದಾಸಿಮಯ್ಯ ಅವರು ನೇಯ್ಗೆ ಕಾಯಕ ಮಾಡುವದರ ಜೊತೆಗೆ, ಮೌಢ್ಯತೆ, ಕಂದಾಚಾರ, ಅಂದಶೃದ್ಧೆ, ಜಾತಿಯತೆ, ಶೋಷಣೆ, ಅನ್ಯಾಯದಂತಹ ಪಿಡುಗುಗಳಿಂದ ತೂತು ಬಿದ್ದ ಸಮಾಜವನ್ನು ತಮ್ಮ ವಚನಗಳ ಮೂಲಕ ನೇಯುವ ಕಾರ್ಯ ಮಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶರಣರಾಗಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾಮಂದಿರ’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಶರಣ ದೇವರ ದಾಸಿಮಯ್ಯನವರ 1044ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ನೆಮ್ಮದಿ, ಸಮೃದ್ಧಯುತ ಜೀವನ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾದ, ಸಮಾಜದಲ್ಲಿ ಒಂದು ಅಮೂಲಾಗ್ರಹವಾದ ಬದಲಾವಣೆಗೆ ಕಾರಣವಾದ ‘ವಚನ ಚಳುವಳಿ’ಗೆ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ‘ರಾಮನಾಥ’ ಎಂಬ ಅಂಕಿತ ನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ ಮಾತನಾಡಿ, ಬಸವಾದಿ ಶರಣರು ರಚಿಸಿರುವ ವಚನಗಳು ಬದುಕಿಗೆ ಅತ್ಯವಶ್ಯಕವಾಗಿವೆ. ವಿದ್ಯಾರ್ಥಿಗಳು ವಚನಗಳನ್ನು ಅರ್ಥ ಸಹಿತ ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ತ್ರೀ ಸಮಾನತೆಗೆ ಶರಣರ ಕೊಡುಗೆ ಮರೆಯುವಂತಿಲ್ಲ ಎಂದರು.

    ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಿಕ್ಷಕರಾದ ಸ್ವಾತಿ ಆರ್.ಪವಾಡಶೆಟ್ಟಿ, ಪ್ರೀತಿ ಜೆ.ಬಿರಾದಾರ, ಸ್ವಾತಿ ಆರ್.ಪವಾಡಶೆಟ್ಟಿ, ಚಂದ್ರಲೇಖಾ ಪೂರ್ಮಕರ್, ಸಾವಿತ್ರಿ ಎನ್.ಪಾಟೀಲ, ಕಾಶಮ್ಮ ಎಸ್.ಚಿಂಚೋಳಿ, ವರ್ಷಾರಾಣಿ, ಈಶ್ವರಿ ಹಂಗರಗಿ, ರೋಹಿತ್ ಸಿ.ವೈ., ಖಮರುನ್ನಿಸ್ ಬೇಗಂ, ಶಿಲ್ಪಾ ಎಸ್.ಕೆ., ಮಾಯಾದೇವಿ ಲಕ್ಷ್ಮೀ ತಾಂಡೂರಕರ್, ಚಂದ್ರಲೇಖಾ ಪೂರ್ಮಕರ್, ಪ್ರೀತಿ ಜೆ.ಬಿರಾದಾರ, ಸಾವಿತ್ರಿ ಎನ್.ಪಾಟೀಲ, ಈಶ್ವರಿ ಹಂಗರಗಿ, ಮಾಯಾದೇವಿ, ವಿಜಯಲಕ್ಷ್ಮೀ, ವಿದ್ಯಾರ್ಥಿ ಪ್ರತಿನಿಧಿಗಳಾದ ಅದಿತಿ, ಆದಿತ್ಯ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.