ಸಮಾನತೆಯ ಬದುಕನ್ನು ಕಟ್ಟಿಕೊಂಡಾಗ ಪ್ರಗತಿ ಸಾಧ್ಯ- ವೈ.ಎಂ. ಸತೀಶ್


ಸಂಜೆವಾಣಿ ವಾರ್ತೆ
ಸಂಡೂರು:ಜು:8;: ಇಂದು ನಾವು ಜಾತಿಯ ಹೆಸರಿನಲ್ಲಿ ಇಡೀ ಸಮಾಜವನ್ನು ತುಂಡು ಮಾಡುತ್ತಿದ್ದೇವೆ ಇದರಿಂದ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ, ಅದ್ದರಿಂದ ಎಲ್ಲಿಯವರೆಗೆ ಜಾತಿಯ ಜಂಜಡದಿಂದ ದೂರ ಬರುವುದಿಲ್ಲವೋ ಅಲ್ಲಿಯ ವರೆಗೆ ನಾವು ಅಭಿವೃದ್ದಿಯನ್ನು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಕೊಂಡಿದ್ದ ಅಕ್ಕನಾಗಲಾಂಬಿಕೆ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಶಿಕ್ಷಣವನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಡೆಯಬೇಕು, ಜೊತೆಗೆ ಜಾತಿಯನ್ನು ಬೀಡಬೇಕು, ಬಸವಣ್ಣನವರು, 12ನೇ ಶತಮಾನದ ಶರಣರು ಜಾತಿರಹಿತ, ವರ್ಗರಹಿತ, ವರ್ಣರಹಿತ ಸಮಾಜವನ್ನು ಕಟ್ಟಲು ತಮ್ಮ ಬದುಕನ್ನೇ ಅರ್ಪಿಸಿದರು, ಅವರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವುದು ಅತಿ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಂದಾಲ್ ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ್ ಪಟ್ಟಣ ಶೆಟ್ಟಿಯವರು ಮಾತನಾಡಿ ಸಮಾನತೆಯನ್ನು ನಾವೆಲ್ಲರೂ ಹೊಂದಬೇಕು, ಕಾರ್ಮಿಕ ಎನ್ನುವ ಪದವನ್ನು ಬಿಟ್ಟು ಇಂದು ನಾವು ಸೇವೆಕೊಡುವವರು ಎನ್ನುವ ಪದವನ್ನು ಬಳಕೆ ಮಾಡುವ ಮೂಲಕ ಕಾರ್ಮಿಕನಲ್ಲಿಯ( ಲೆಬರ್ ಪದದ ಬದಲು ಸರ್ವಿಸ್ ಪದ ಬಳಸಿ) ಸಮಾನತೆಯನ್ನು ಕಾಣಬೇಕಾಗಿದೆ. ಅಲ್ಲದೆ ಇಂದು ಬಹಳಷ್ಟು ಹಂತದಲ್ಲಿ ಮಾಲಿನ್ಯವಾಗುತ್ತಿದೆ ಅದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ಕೊಡುವ ಮತ್ತು ಬೆಳೆಸುವ ಕಾರ್ಯ ಮಾಡಬೇಕಾದುದು ಅತಿ ಅಗತ್ಯ ಎಂದರು.
ಸಾನಿಧ್ಯ ವಹಿಸಿದ್ದ ಡಿ.ಅಂತಾಪುರದ ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಇಂದು ನಾವು ವೀರಶೈವ ಲಿಂಗಾಯತರು ಎಂದು ಹೇಳುವ ನಾವು ನಮ್ಮ ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ, ವಿಭೂತಿ, ರುದ್ರಾಕ್ಷಿ, ಲಿಂಗದ ಧಾರಣೆಯಿಂದ ದೂರ ಉಳಿಯುತ್ತಿದ್ದೇವೆ, ಗುರು ಹಿರಿಯರಲ್ಲಿ ಗೌರವಭಾವನೆ ಇಲ್ಲವಾಗುತ್ತಿದೆ, ಒಗ್ಗಟ್ಟು ದೂರವಾಗುತ್ತಿದೆ, ಮತ್ತೊಂದು ಪಂಗಡಗಳಲ್ಲಿ ನಾವು ಕಾಣುವ ಒಗ್ಗಟ್ಟು ನಮ್ಮಲ್ಲಿ ಏಕೆ ಇಲ್ಲ ಎಂದು ಪ್ರಶ್ನಿಸುವ ಮೂಲಕ ಸಮಾನತೆಯ ಧರ್ಮ ಲಿಂಗಾಯತ ಧರ್ಮದಲ್ಲಿ ನಾವು ಸಮಾನತೆಯನ್ನು ತರಬೇಕು, ಅಲ್ಲದೆ ಪರಿಸರ ನಾಶವಾಗುತ್ತಿದ್ದು ಅದನ್ನು ರಕ್ಷಿಸಿ ಉಳಿಸಿ ಬೆಳೆಸಬೇಕು, ಅದಕ್ಕೆ ಮದುವೆ, ಇತರ ಸಮಾರಂಭಗಳಲ್ಲಿ ಸಸ್ಯಗಳನ್ನು ವಿತರಿಸಿ, ಅದರಲ್ಲಿ ಒಂದು ಕಲ್ಪವೃಕ್ಷವನ್ನು ಬೆಳೆಸಿದರೆ ಅದು ನಿಮ್ಮನ್ನು ಬೆಳೆಸುತ್ತದೆ, ಸಾಕುತ್ತದೆ ಅದ್ದರಿಂದ ಕಡ್ಡಾಯವಾಗಿ ತೆಂಗಿನ ಸಸಿಗಳನ್ನು ಕೊಡಿ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಮಹಾಸ್ವಾಮಿಗಳು ಮಾತನಾಡಿ 12ನೇ ಶತಮಾನದ ಬಸವಾದಿ ಶರಣರು ರಚಿಸಿದ ಸಾಹಿತ್ಯ ಇಂದಿಗೂ ನಿತ್ಯ ಸತ್ಯವಾಗಿದೆ, ಅವುಗಳ ಅಳವಡಿಕೆ ನಮ್ಮೇಲ್ಲರ ಅದ್ಯ ಕರ್ತವ್ಯವಾಗಿ ಪಾಲಿಸಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ರಾಜರೂ ಸಹ ಮಾರುಹೋಗಿ ಶರಣರ ಸಂಗ ಮಾಡುವ ಮೂಲಕ ಶರಣತತ್ವಗಳಾದ ಕಾಯಕ ಮತ್ತು ದಾಸೋಹ ಸೇವೆಯನ್ನು ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಅಕ್ಕ ನಾಗಲಾಂಬಿಕೆ ಎನ್ನುವ ನಾಟಕವನ್ನು ಧಾತ್ರಿ ರಂಗಸಂಸ್ಥೆ ಸಿರಿಗೇರಿ ಯವರು ಬಹು ಅದ್ಬುತವಾಗಿ ಪ್ರದರ್ಶನ ನೀಡಿದರು, ಈ ನಾಟಕವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾಣೇಹಳ್ಳಿ ಇವರು ರಚಿಸಿದ್ದಾರೆ, ನಾಟಕದ ನಿರ್ದೇಶನವನ್ನು ಹನುಮಂತಪ್ಪ ರಾಯಚೂರು ಇವರು ನಿರ್ದೇಶೆಸಿದರೆ, ಶ್ರೀ ಜಗದೀಶ್ ಅರ್. ಜಾನಿ ಸಂಗೀತ ನಿರ್ದೇಶನ ಮಾಡಿದರು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.