ಸಮಾನತೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಅಬ್ಬಯ್ಯ

ಹುಬ್ಬಳ್ಳಿ, ಜ10- ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಿ. ದೇವರಾಜ ಅರಸು ಅವರ ಕಲ್ಪನೆಯಂತೆ ಸರ್ವ ಸಮುದಾಯಗಳು ಸಮಾನವಾಗಿ ಪ್ರಾತಿನಿಧ್ಯ ಹೊಂದಬೇಕಿದ್ದು, ಎಲ್ಲ ರಂಗದಲ್ಲೂ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಸಾಧಿಸಿದಾಗಲೇ ದೇಶದ ನೈಜ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಜಿಲ್ಲಾ ಪಂಚಾಯತ್ ಧಾರವಾಡ, ಜಿಲ್ಲಾ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಇಲ್ಲಿನ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲನಿಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರಿ ಸೌಲಭ್ಯಗಳ ಬಗೆಗಿನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂಪತ್ತು ಕೆಲವೇ ಕೆಲವು ಜನರಲ್ಲಿ ಕ್ರೋಢೀಕರಣವಾಗದೇ ಎಲ್ಲರಿಗೂ ಹಂಚಿಕೆಯಾಗಬೇಕು. ದೇಶದ ಸಂಪತ್ತಿನ ಶೇ. 70ರಷ್ಟು ಭಾಗ ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 3ರಷ್ಟು ಜನರಲ್ಲಿ ಮಾತ್ರವಿದ್ದು, ಆರ್ಥಿಕ ಅಸಮಾನತೆ ಸೃಷ್ಠಿಸಿದೆ. ದಿನಂಪ್ರತಿ ದುಡಿದು ತಿನ್ನುವ ಅಲೆಮಾರಿ ಜನಾಂಗದವರು ಲಭ್ಯವಿರುವ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸೇರಿದಂತೆ ಎಲ್ಲ ರಂಗದಲ್ಲೂ ಮುನ್ನಲೆಗೆ ಬರಬೇಕು. ಶಿಕ್ಷಣದಿಂದಷ್ಟೇ ಶೋಷಣೆ, ಅಸಮಾನತೆ ನಿವಾರಣೆ ಸಾಧ್ಯ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಇಲಾಖೆಯಿಂದ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿಗಳ ಸಮೀಕ್ಷೆ ಕಾರ್ಯ ಕೈಗೊಂಡು ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಅವುಗಳನ್ನು ಅಲೆಮಾರಿಗಳ ಮನೆ ಬಾಗಿಲಿಗೇ ತಲುಪಿಸುವ ಕಾರ್ಯವಾಗಬೇಕು. ಶೀಘ್ರದಲ್ಲೇ ಕ್ಷೇತ್ರದಲ್ಲಿನ ಅಲೆಮಾರಿಗಳ ಸೌಲಭ್ಯ ಕುರಿತು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಗಳ ಪ್ರಗತಿ ಪರಿಶೀಲಿಸಲಾಗುವುದು ಎಂದ ಶಾಸಕರು, ಅಲೆಮಾರಿ ಜನಾಂಗದವರ ಅಲೆದಾಟ ತಪ್ಪಿಸಿ ಜೀವನಕ್ಕೆ ಭದ್ರ ನೆಲೆ ಕಲ್ಪಿಸಲು ಇಂಥ ಕಾರ್ಯಾಗಾರ ಅತ್ಯವಶ್ಯವಾಗಿದೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 2018-19ನೇ ಸಾಲಿನ ಬಜೆಟ್‍ನಲ್ಲಿ 10,442 ಕೋ.ರೂ. ಅನುದಾನ ಒದಗಿಸಿದಲ್ಲದೇ, ಅಲೆಮಾರಿ/ ಅರೆಅಲೆಮಾರಿ ಜನಾಂಗದ ಸಮಗ್ರ ಅಭಿವೃದ್ಧಿಗೆ 100 ಕೋ.ರೂ. ವಿಶೇಷ ಅನುದಾನ ಸಹ ಮೀಸಲಿರಿಸಿತ್ತು. 2008ರಿಂದ 2013ರವರೆಗೆ ಅಲೆಮಾರಿ ಜನಾಂಗದವರ ಶೈಕ್ಷಣಿಕ, ಆರ್ಥಿಕ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇವಲ 81 ಕೋ.ರೂ. ಒದಗಿಸಿದ್ದರೆ 2013-2018ವರೆಗಿನ ನಮ್ಮ ಸರ್ಕಾರದಲ್ಲಿ 348 ಕೋ.ರೂ. ವಿನಿಯೋಗಿಸಿ ಸಮುದಾಯದ ಪ್ರಗತಿಗೆ ಹೆಚ್ಚು ಒತ್ತು ನೀಡಿತ್ತು ಎಂದು ತಿಳಿಸಿದರು.
ಇಲಾಖೆಯ ವಿಸ್ತರಣಾಧಿಕಾರಿ ಸುರೇಶ ಗುರಣ್ಣವರ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆಯಿಂದ 46 ಅಲೆಮಾರಿ/ ಅರೆಅಲೆಮಾರಿ ಸಮುದಾಯಗಳನ್ನು ಗುರುತಿಸಿದ್ದು, ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ 2007ರಲ್ಲಿ ಪ್ರತ್ಯೇಕ ಅಲೆಮಾರಿ ಕೋಶ ಹಾಗೂ 2011ರಲ್ಲಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ವಿವಿಧ ಯೋಜನೆಗಳ ಮೂಲಕ ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದೆ ಎಂದರು.
ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾದೇವ ಮಳಲಿ, ಶಿಶು ಅಭಿವೃದ್ಧಿ ಅಧಿಕಾರಿ ಸುಧಾ ಹೊಸಮನಿ ಅವರು ಇಲಾಖೆಯಲ್ಲಿನ ಯೋಜನೆಗಳ ಕುರಿತು ಉಪನ್ಯಾನ ನೀಡಿದರು. ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ. ಕರವೀರಮಠ, ಮುಖಂಡರಾದ ಜಯರಾಜ್ ಢೋಂಗ್ರಿ, ಕೃಷ್ಣಾ ಕಾನನ, ಧರ್ಮರಾಜ ಪೂಜಾರ್, ಕಟ್ಟಿಮನಿ, ಪರಶುರಾಮ ದೊಡ್ಡಮನಿ, ಅಧಿಕಾರಿಗಳಾದ ಮಹೇಶ ಅಂಗಡಿ, ಇಂದುಧರ ಮುತ್ತಳ್ಳಿ ಇತರರು ಇದ್ದರು.