ಸಮಾನತಾ ಸಮಾವೇಶ: ಡಾ. ಬೆಲ್ದಾಳ ಶರಣರು

ಬೀದರ:ಜ.1:ಪ್ರಸ್ತುತ ಸಮಾಜದಲ್ಲಿ ಧರ್ಮ,ಜಾತಿ, ವರ್ಗ, ಗೋಡೆಗಳನ್ನು ದಾಟಿ ಸಮಾನತೆ ತತ್ವದಿಂದ ನಡೆದು ಸಾಮರಸ್ಯದಿಂದ ಎಲ್ಲರೂ ಕೂಡಿ ಇದ್ದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ ಹಾಗೂ ಸಮಾಜದಲ್ಲಿ ಶಾಂತಿಯ ತೋಟ ನೆಲೆಸುತ್ತದೆ ಎಂದು ಬಸವಶ್ರೀ ಪೂಜ್ಯ ಡಾ. ಬೆಲ್ದಾಳ ಶರಣರು ತಿಳಿಸಿದರು. ನಿನ್ನೆಯ ದಿವಸ ಶಾಸಕರಾದ ಅರವಿಂದ ಕುಮಾರ ಅರಳಿಯವರ ಕಚೇರಿಯಲ್ಲಿ ಪೂಜ್ಯ ಬೆಲ್ದಾಳ ಶರಣರ ಸಾನಿಧ್ಯದಲ್ಲಿ ಸಮಾನತಾ ಸಮಾವೇಶ ಕಾರ್ಯಕ್ರಮದ ಬಗ್ಗೆ ಪೂರ್ವಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

   ಬಸವ ಮಹಾಮನೆ ಟ್ರಸ್ಟ್, ಬಸವ ಕಲ್ಯಾಣ ವತಿಯಿಂದ ಬರುವ ಜನೇವರಿ 7, 2024ರಂದು ಬೃಹತ್ ಪ್ರಮಾಣದಲ್ಲಿ ಸಮಾನತೆ ಸಮಾವೇಶ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಈ ಸಭೆಯಲ್ಲಿ ಶಾಸಕರಾದ ಶ್ರೀ ಅರವಿಂದಕುಮಾರ ಅರಳಿ ಮಾತನಾಡಿ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಧರ್ಮಾತೀತ, ಜಾತ್ಯಾತೀತ, ಪಕ್ಷಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ನಡೆಯಬೇಕೆಂದು ಸಲಹೆ ನೀಡಿದರು. ಹಿರಿಯ ಮುಖಂಡರಾದ ಶ್ರೀಕಾಂತ ಸ್ವಾಮಿ ಮಾತನಾಡಿ ಸಮಾನತಾ ಸಮಾವೇಶಕ್ಕೆ ಪೂಜ್ಯ ಬೆಲ್ದಾಳ ಶರಣರು ನಿರ್ಧರಿಸಿದಂತೆ ಪೂಜ್ಯರು, ಸಚಿವರು, ಗಣರನ್ನು ಆಹ್ವಾನಿಸುವ ಬಗ್ಗೆ ಕಾಲಮಿತಿಯಲ್ಲಿ ಆಹ್ವಾನಿಸಲು ತಿಳಿಸಿದರು. ಲಕ್ಷ್ಮಣ ದಸ್ತಿಯವರು ಮಾತನಾಡಿ ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಕಾರ್ಯಕ್ರಮದ ಯಶಸ್ವಿಗೆ ಬಸವಕಲ್ಯಾಣ ಸೇರಿದಂತೆ ಬೀದರ, ಕಲಬುರಗಿ ಭಾಗದ ಕ್ರಿಯಾಶೀಲ ನಾಯಕರ ಸಾಮಾಜಿಕ ಕಾರ್ಯಕರ್ತರ ಉಪಸಮಿತಿಗಳನ್ನು ರಚಿಸಲು ಸಲಹೆ ನೀಡಿದರು.
     ಈ ಸಭೆಯಲ್ಲಿ ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಅಬ್ದುಲ್ ಖದೀರ್, ಪ್ರಮುಖರಾದ ವಿನಯ ಮಾಳಗೆ, ಚಂದ್ರಶೇಖರ ಪಾಟೀಲ, ಶಿವಶಂಕರ ಟೋಕರೆ, ಮಹಾಲಿಂಗ, ಕೇದಾರನಾಥ ಪಾಟೀಲ, ರೋಹನ, ಉದಯಕುಮಾರ ಉಪಸ್ಥಿತರಿದ್ದರು.