ಸಮಾಜ ಸೇವೆ ಗುರುವಿನ ಪೂಜೆಯಾಗಲಿ

ಕಲಬುರಗಿ:ಜು.15: ಹುಟ್ಟಿದ ಜಾತಿ, ಧರ್ಮದಿಂದ ಗುರುವಾಗಲು ಸಾಧ್ಯವಿಲ್ಲ. ಬದಲಿಗೆ ಯಾವ ವ್ಯಕ್ತಿ ತನ್ನ ಜೀವನದಲ್ಲಿ ಅರಿವು ಆಚಾರ,ವಿಚಾರ, ಅನುಭಾವ, ಉನ್ನತ ವ್ಯಕ್ತಿತ್ವವನ್ನು ಹೊಂದಿ, ಸಮಾಜಕ್ಕೆ ತನ್ನದೇ ಆದ ನಿರಂತರವಾದ ಕೊಡುಗೆಯನ್ನು ನೀಡುವ ಮೂಲಕ ಗುರುವಿನ ಸ್ಥಾನ ಲಭ್ಯವಾಗುತ್ತದೆ. ಸಮಾಜ ಸೇವೆಯೇ ಗುರುವಿನ ನಿಜವಾದ ಪೂಜೆಯಾಗಬೇಕಾಗಿದೆ ಎಂದು ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಶಹಾಬಜಾರದ ಸುಲಫಲ ಮಠದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಸಂಜೆ ತಮಗೆ ಏರ್ಪಡಿಸಿದ್ದ ‘ಗುರುವಂದನಾ ಸಮಾರಂಭ’ದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

‘ಜಗದ್ಗುರು’ ಎಂದು ಕರೆಸಿಕೊಳ್ಳಬೇಕಾದರೆ, ಕೇವಲ ಎತ್ತರದ ಸ್ಥಾನದಲ್ಲಿ ಕುಳಿತರೇ ಸಾಲದು. ಬದಲಿಗೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ನೋವಿಗೆ ಸ್ಪಂದಿಸುವ, ದೀನ-ದಲಿತರ, ಶೋಷಿತ, ಬಡವರ ಕಣ್ಣಿರನ್ನು ಒರೆಸುವ ಗುಣ ಹೊಂದಿರಬೇಕು. ಬಸವಾದಿ ಶರಣರು ಇಡೀ ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿ ಶ್ರಮಿಸುವ ಮೂಲಕ ‘ವಿಶ್ವಗುರು’ವಾಗಿದ್ದಾರೆ ಎಂದರು.

ಗು.ವಿ.ವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಡಾ.ಸಾರಂಗಧರ ಶ್ರೀಗಳು ಸಮಾಜದ ಬಗ್ಗೆ ನಿಜವಾಗಿಯೂ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ಇವರೊಬ್ಬ ವ್ಯಕ್ತಿಯಲ್ಲ, ಬದಲಿಗೆ ಅದ್ಭುತ ಶಕ್ತಿಯಗಿದ್ದಾರೆ. ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುವ ಮೂಲಕ ನ್ಯಾಯವನ್ನು ದೊರಕಿಸಿಕೊಡುತ್ತಿರುವದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಗುರುವಿಗೆ ಬಳಗವು ಗೌರವಿಸುವ ಮೂಲಕ ಸಾಮಾಜಿಕ ಸೇವೆಗೆ ಮನ್ನಣೆ ಹಾಗೂ ಗೌರವಿಸಿದಂತಾಗಿದೆ ಎಂದರು.
  ಸಮಾರಂಭದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಎಂ.ಬಿ.ನಿಂಗಪ್ಪ, ಬಸಯ್ಯಸ್ವಾಮಿ ಹೊದಲೂರ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ರಾಜಕುಮಾರ ಬಟಗೇರಿ, ಬಸವರಾಜ ಹೆಳವರ ಯಾಳಗಿ, ನಾಗೇಶ ತಿಮಾಜಿ ಬೆಳಮಗಿ, ಮಲ್ಲಿನಾಥ ನಾಟಿಕಾರ, ರಾಕೇಶ ಇಟಗಿ ಸೇರಿದಂತೆ ಬಳಗದ ಸದಸ್ಯರು, ಮಠದ ಭಕ್ತರು ಭಾಗವಹಿಸಿದ್ದರು.