ಸಮಾಜ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಅಗತ್ಯ : ಪ್ರೊ.ವಿ.ಟಿ.ಕಾಂಬಳೆ

ಕಲಬುರಗಿ:ಜು.29: ಸಮಾಜದಲ್ಲಿರುವ ದೀನ-ದಲಿತ, ಶೋಷಿತ, ಅಸಹಾಯಕರಿಗೆ ಸಹಾಯ ಹಸ್ತ ಚಾಚಬೇಕು. ಅವರಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವ್ಯಕ್ತಿಯು ತನ್ನ ಸ್ವಾರ್ಥ ಜೀವನ ಸಾಗಿಸಿದರೆ ಅಂತಹ ಜೀವನಕ್ಕೆ ಬೆಲೆಯಿಲ್ಲ. ಜೊತೆಗೆ ಸಮಾಜ ಸೇವಾ ಮನೋಭಾವನೆ ಬೆಳೆಸಿಕೊಂಡು ಸೇವೆಯನ್ನು ಮಾಡಿದರೆ ಸಾರ್ಥಕ ಜೀವನ ನಮ್ಮದಾಗುತ್ತದೆ ಎಂದು ಗುವಿವಿ ಕುಲಸಚಿವ ಪ್ರೊ.ವಿ.ಟಿ.ಕಾಂಬಳೆ ಅಭಿಪ್ರಾಯಪಟ್ಟರು.
ನಗರದ ಕಸ್ತುರಬಾ ಬಾಲಕಿಯರ ಶಾಲೆಯ ವಿದ್ಯಾರ್ಥಿಗಳಿಗೆ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ವತಿಯಿಂದ ಗುರುವಾರ ಸಂಜೆ ಸ್ವೆಟರ್‍ಗಳ ವಿತರಣೆ ಹಾಗೂ ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಸಮಾಜಮುಖಿ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜಮುಖಿ ವೈದ್ಯ ಡಾ.ಮಲ್ಲಾರ್‍ರಾವ್ ಮಲ್ಲೆ ಮಾತನಾಡಿ, ಹೆಪಟೈಟಿಸ್ ಕಾಯಿಲೆಯು ವೈರಾಣುವಿರುವ ಕಲುಷಿತ ನೀರಿನ ಸೇವನೆ, ಸೋಂಕಿತ ವ್ಯಕ್ತಿಯ ಮಲ, ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ವೈರಾಣು ದೇಹವನ್ನು ಪ್ರವೇಶಿಸುತ್ತದೆ. ಸುಸ್ತು, ಹಸಿವಿಲ್ಲದಿರುವಿಕೆ, ಹೊಟ್ಟೆನೋವು, ವಾಕರಿಕೆ, ಗಾಡ ಬಣ್ಣದ ಮೂತ್ರ, ಮೈ-ಕೈ ನೋವು, ತೂಕ ಇಳಿಕೆ, ಚರ್ಮ ಮತ್ತು ಕಣ್ಣು ಹಳದಿ ಬಣ್ಣವಾಗುವುದು ಅಂದರೆ ಕಾಮಾಲೆ ರೋಗ ಇದರ ಪ್ರಮುಖ ಲಕ್ಷಣಗಳಾಗಿವೆ. ಶುದ್ಧ ಆಹಾರ ಮತ್ತು ನೀರಿನ ಸೇವನೆ, ವೈಯಕ್ತಿಕ ಸ್ವಚ್ಛತಗೆ ಹೆಚ್ಚಿನ ಗಮನವನ್ನು ನೀಡುವುದು, ಸೋಂಕಿತ ವ್ಯಕ್ತಿಯ ದೈಹಿಕ ಸಂಪರ್ಕ ಮಾಡದಿರುವುದು, ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಬಾರದಂತೆ ತಡೆಯಲು ಹೆಪಟೈಟಿಸ್ ಲಸಿಕೆಗಳನ್ನು ಹಾಕುವುದು ತಡೆಗಟ್ಟುವ ವಿಧಾನಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಸುನೀಲಕುಮಾರ ಎಚ್.ವಂಟಿ, ಜಯಶ್ರೀ ಎಚ್.ವಂಟಿ, ಸುಜಯ್ ಎಚ್.ವಂಟಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸಂಜೀವಕುಮಾರ ಶೆಟ್ಟಿ, ಸುನೀತಾ ರಡ್ಡಿ, ವೀರೇಶ ಬೋಳಶೆಟ್ಟಿ ನರೋಣಾ, ಚಂದ್ರಣ್ಣ ಮಲ್ಕಾಪುರೆ, ವೆಂಕಟೇಶ ರಂಗಂಪೇಟ್, ಸಂಗಮೇಶ ಇಮ್ಡಾಪೂರ್, ಪ್ರೊ.ಶಂಕರಲಿಂಗ ಹೆಂಬಾಡೆ, ಅಶೋಕ ಕಾಳೆ, ಬಸವರಾಜ ಎಸ್.ಪುರಾಣೆ, ಮಲ್ಲಿನಾಥ ನಾಟಿಕಾರ, ಸುವರ್ಣಾ, ಶ್ರೀದೇವಿ, ಸಂಪತ್ತಕುಮಾರಿ, ಸುರಾಖಾ, ಸುವರ್ಣ, ವಾಣಿಶ್ರೀ, ನೀಲಮ್ಮಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ನಿಖಿತಾ, ಮಹಾದೇವಿ ಪ್ರಾರ್ಥಿಸಿದರು. ಸಂಗೀತಾ, ನಂದಿನಿ ಸ್ವಾಗತಿಸಿದರು. ರಮೇಶ ಯಾಳಗಿ ನಿರೂಪಿಸಿದರು. ಎಂ.ಬಿ.ನಿಂಗಪ್ಪ ವಂದಿಸಿದರು.