ಸಮಾಜ ಸೇವಕ ಡಾ.ಪರಮೇಶ್ವರಪ್ಪಗೆ ಅಭಿನಂದನಾ ಸನ್ಮಾನ

ಚಾಮರಾಜನಗರ, ಏ.17- ನಗರದ ಸಮತಾ ಸೊಸೈಟಿ ವತಿಯಿಂದ ಕರುನಾಡ ಸಿಂಹ ಪ್ರಶಸ್ತಿ ಪಡೆದ ವೀರಶೈವ-ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಮಾಜ ಸೇವಕ ಡಾ.ಪರಮೇಶ್ವರಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ದೀಪಾ ಅವರು, ಲಾಕ್‍ಡೌನ್‍ನಂತಹ ಸಮಯದಲ್ಲಿ ಡಾ|| ಪರಮೇಶ್ವರಪ್ಪ ರವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಅನೇಕ ಮಂಗಳಮುಖಿಯರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಇವರನ್ನು ಸನ್ಮಾನಿಸುತ್ತಿರುವುದು ಸಂತೋಷಕರ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಇತ್ತೀಚೆಗೆ ಡಾ.ಪರಮೇಶ್ವರಪ್ಪ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ನಯನ ಕಲಾಮಂದಿರದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸಾಹಿತಿ ದೊಡ್ಡರಂಗೇಗೌಡ ಅವರು ಕರುನಾಡ ಸಿಂಹ ರಾಷ್ಟ್ರೀಯ ಪ್ರಶಸ್ತಿಯನ್ನು ಪರಮೇಶ್ವರಪ್ಪರಿಗೆ ನೀಡಿ ಗೌರವಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ||ಪರಮೇಶ್ವರಪ್ಪ ಅವರು, ಸಮಾಜದಲ್ಲಿ ಅನೇಕ ಜನರು ಬಡತನದಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇನೆ. ಇದರಿಂದ ನನಗೆ ಆತ್ಮತೃಪ್ತಿ, ನೆಮ್ಮದಿ ತಂದಿದೆ. ಮುಂದೆಯೂ ಸಹ ಇದೇ ರೀತಿ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಸಂಸ್ಥೆಯ ದೀಪಾ, ಬುದ್ಧ ನಂದಿನಿ ಹಾಲಿನಿ ಕೇಂದ್ರದ ಶಿವಕುಮಾರ್ ಇದ್ದರು.