ಸಮಾಜ ಸೇವಕರು, ಸಂಸ್ಥೆಗಳು ಹೆಚ್ಚಲಿ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕಲಬುರಗಿ:ಏ.30: ಸ್ವಾರ್ಥತೆ ಪ್ರಮುಖವಾಗಿರುವ ಪ್ರಸ್ತುತ ದಿನಗಳಲ್ಲಿ ಅತ್ಯಂತ ಬೆಲೆಯುಳ್ಳ, ಅಪರೂಪದ್ದು ಎಂದರೆ ಸಮಾಜ ಸೇವೆ. ಸಮಾಜದಲ್ಲಿರುವ ಅವಶ್ಯಕತೆಯಿರುವವರು, ಅಸಹಾಯಕರಿಗೆ ಸೇವೆ ನೀಡುವುದು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣದ ಬಗ್ಗೆ ಜನಜಾಗೃತಿ, ಮಹನೀಯರ ಸಂದೇಶ ಸಮಾಜಕ್ಕೆ ಮುಟ್ಟಿಸುವುದು ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥವಾಗಿ ಮಾಡುವ ನೈಜ ಸಮಾಜ ಸೇವಕರು, ಸಂಸ್ಥೆಗಳು ರಾಷ್ಟ್ರದ ಅಮೂಲ್ಯ ಆಸ್ತಿಯಾಗಿದ್ದು, ಹೇಚ್ಚಾಗಬೇಕಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಎಚ್ ಆಶಯ ವ್ಯಕ್ತಪಡಿಸಿದರು.
ಆಳಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ‘ಆಳಂದ ಸೈನಿಕರ ಅಭಿವೃದ್ಧಿ ಸಂಘ’ದ ವತಿಯಿಂದ ಜರುಗುತ್ತಿರುವ ಉಚಿತ ಸೈನಿಕರ ತರಬೇತಿ ಶಿಬಿರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ಬಸವೇಶ್ವರ ಸಮಾಜ ಸೇವಾ ಬಳಗ’ದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಗೌರವ ಸಲಹೆಗಾರ ಹಾಗೂ ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಬಸವೇಶ್ವರ ಸಮಾಜ ಸೇವಾ ಬಳಗವು ಕಳೆದ 7 ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುತ್ತಿದೆ. ಇಲ್ಲಿಯವರೆಗೆ 3638 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಸಲ್ಲಿಸಿದೆ. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಆಹಾರ, ನೀರು, ಮಜ್ಜಿಗೆ, ಮಾಸ್ಕ್, ಸಾನಿಟೈಸರ್ ವಿತರಣೆ, ಕೋವಿಡ್ ಜಾಗೃತಿಯ ಕೆಲಸವನ್ನು ಮಾಡಿದೆ. ವಿವಿಧ ವಲಯಗಳಾದ ಪರಿಸರ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆಗಳು, ಸೇವಾ ವಲಯ, ಗಿಡ ನೆಡುವುದು, ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ, ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ ಅಭಿವೃದ್ಧಿ ಶಿಬಿರ, ಜಲ ಜಾಗೃತಿ, ಮಹನೀಯರ ಜೀವನ-ಸಾಧನೆ, ಸಂವಿಧಾನದ ಸಾವಿರಾರು ಪುಸ್ತಕಗಳ ಉಚಿತ ವಿತರಣೆ, ವಿಶ್ವದ ಎಲ್ಲಾ ಮಹನೀಯರ ಜಯಂತಿ, ಸ್ಮರಣೆಯ ಮೂಲಕ ಜಾಗೃತಿ ಸೇರಿದಂತೆ ಮುಂತಾದ ಸಮಾಜ ಸೇವೆಯನ್ನು ದಣಿವರಿಯದೇ ನಿರಂತರವಾಗಿ ಸಲ್ಲಿಸುತ್ತಿದ್ದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಮಾಣಿಕರಾವ ಬಿರಾದಾರ, ಚಂದ್ರಕಾಂತ ಯಲಮೇಲಿ, ಉಲ್ಲಾಸ್ ಸಿಂಗೆ, ಸಿದ್ದಾರ್ಥ ಹುಸೂರೆ, ತಾನಾಜಿ ಜಾಧವ, ಕೃಷ್ಣ ಲುಗಡೆ, ಧರ್ಮಾ ಸಿಂಗೆ ಹಾಗೂ ಸೈನಿಕ ತರಬೇತಿಯ ಯುವಕ-ಯುವತಿಯರು ಪಾಲ್ಗೊಂಡಿದ್ದರು. ಸುಮಾ ವಚನ ಪ್ರಾರ್ಥನೆ ಮಾಡಿದಳು. ಬಳಗದ ಕಾರ್ಯದರ್ಶಿ ರಾಜಶೇಖರ ಬಿ.ಮರಡಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ವಿವಿಧ ಕ್ಷೇತ್ರದ ಸಾಧಕರಾದ ಶಿವಬಸಪ್ಪ ಎಸ್.ಮಲಶೆಟ್ಟಿ (ಕೃಷಿ), ಸಿದ್ದಲಿಂಗಪ್ಪ ಮಲಶೆಟ್ಟಿ (ರಕ್ಷಣೆ), ಡಾ.ಯೋಗೇಶ್ ಎಸ್.ಬಿ (ವೈದ್ಯಕೀಯ) ಮತ್ತು ಗೀತಾ ಎ.ಪಾಟೀಲ(ಶಿಕ್ಷಣ) ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.