ಸಮಾಜ ಸೇವಕರದ್ದು ಆದರ್ಶವಿಲ್ಲದ ರಾಜಕಾರಣ

ಗೌರಿಬಿದನೂರು, ಏ.೨೬- ರಾಜ್ಯದಲ್ಲಿ ಜೆಡಿಎಸ್ ಪಕ್ಷ ನೀಡಿರುವ ಪ್ರಣಾಳಿಕೆಯನ್ನು ಜನರ ಮುಂದಿಟ್ಟು, ಕುಮಾರಣ್ಣನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಮತಯಾಚನೆ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ರವರ ಗೆಲುವಿಗೆ ಸಂಕಲ್ಪ ಮಾಡೋಣ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಿ.ಮಂಜುನಾಥರೆಡ್ಡಿ ತಿಳಿಸಿದರು.
ಕಲ್ಲೂಡಿ ಗ್ರಾಮದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಟರು ನೀಡಿರುವ ಪಂಚರತ್ನ ಯೋಜನೆಯು ಕೇವಲ ಸೀಮಿತ ಸಮುದಾಯಕ್ಕಾಗಿ ಮೀಸಲಿಟ್ಟಿರುವುದಲ್ಲ. ಎಲ್ಲ ವರ್ಗ ಮತ್ತು ಸಮುದಾಯಗಳಿಗೆ ತಲುಪಲಿದೆ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ತತ್ವ, ಸಿದ್ದಾಂತ ಮತ್ತು ಗುರಿಯಿದ್ದು, ಅದರಡಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಔದಾರ್ಯತೆಯನ್ನು ಹೊಂದಿದ್ದೇವೆ. ಆದರೆ ಕ್ಷೇತ್ರದಲ್ಲಿ ರಾಜಕಾರಣ ಮಾಡಲು ಬಂದಿರುವ ಸಮಾಜಸೇವಕರಿಗೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಅಕ್ರಮವಾಗಿ ಸಂಪಾದನೆ ಮಾಡಿದ ಹಣದಿಂದ ಕಾರ್ಯಕರ್ತರು ಮತ್ತು ಮತದಾರರ ಮನಸ್ಸನ್ನು ವಿಚಲಿತಗೊಳಿಸಿ ತಪ್ಪು ದಾರಿಗೆ ಕರೆದೊಯ್ಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.
ಕೇವಲ ಹಣ ಬಲದಿಂದ ಮತದಾರರನ್ನು ಕೊಳ್ಳಲು ಸಾಧ್ಯವಿಲ್ಲ, ಪ್ರೀತಿ ವಿಶ್ವಾಸ ಮತ್ತು ನಂಭಿಕೆಯಿಂದ ಮಾತ್ರ ಜನರ ಆಶೀರ್ವಾದ ಪಡೆಯಲು ಸಾಧ್ಯ. ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದ ಪ್ರತೀ ಬೂತ್ ಮಟ್ಟದಲ್ಲಿ ಮನಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೇವೆ. ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಕಳೆದ ೩೦ ವರ್ಷಗಳಿಂದ ಮಾಡಿರುವ ಸೇವಾ ಕಾರ್ಯಗಳನ್ನು ಜನತೆಗೆ ತಿಳಿಸುತ್ತಿದ್ದೇವೆ. ಪಕ್ಷದಲ್ಲಿನ ಕಾರ್ಯಕರ್ತರು ಮತ್ತು ಮುಖಂಡರು ತಲೆತಗ್ಗಿಸುವಂತಹ ಯಾವುದೇ ಕಾರ್ಯಕ್ಕೆ ನಾವುಗಳು ಮುಂದಾಗುವುದಿಲ್ಲ ಎಂದು ಹೇಳಿದರು.
ಮುಖಂಡರಾದ ಪ್ರಭಾಕರ್ ಮಾತನಾಡಿ, ಕ್ಷೇತ್ರದ ಉದ್ದಗಲಕ್ಕೂ ಈಗಾಗಲೇ ಸಂಚರಿಸಿ ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಪರವಾಗಿ ಮತಯಾಚನೆ ಮಾಡಿದ್ದೇವೆ. ಎಲ್ಲೆಡೆ ಮತದಾರರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ೬೦ ಸಾವಿರ ಮತಗಳನ್ನು ಪಡೆದಿದ್ದು ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸುವ ಭರವಸೆಯನ್ನು ಮತದಾರರು ನೀಡಿದ್ದಾರೆ ಎಂದು ಹೇಳಿದರು.
ಮುಖಂಡರಾದ ಸಿ.ಗಂಗಲಕ್ಷ್ಮಮ್ಮ, ವೆಂಕಟಾಚಲ, ನಾಗರಾಜ್, ಕೃಷ್ಣಪ್ಪ, ರಾಜಣ್ಣ, ಜಿ.ಗಂಗಾಧರಯ್ಯ, ಮುದ್ದರಂಗಪ್ಪ, ಕೆ.ಜಿ.ಗಂಗಪ್ಪ, ಪಿ.ಪ್ರಕಾಶ್, ಕಿಟ್ಟಿ, ದೇವರಾಜ್, ಶಾಂತರಾಜು, ಶ್ರೀನಿವಾಸ ಸೇರಿದಂತೆ ಇತರರು ಭಾಗವಹಿಸಿದ್ದರು.