ಸಮಾಜ ಸುಧಾರಣೆಗೆ ಹಡಪದ ಅಪ್ಪಣ್ಣನವರ ಕೊಡುಗೆ ಅಪಾರ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪; 12ನೇ ಶತಮಾನದಲ್ಲಿ ಆದ್ಯ ವಚನಕಾರರಾಗಿ, ಪ್ರಮುಖವಾದ ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದ ಶಿವಶರಣ ಹಡಪದ ಅಪ್ಪಣ್ಣನವರು ಸಮಾಜ ಸುಧಾರಣೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದು  ಹೊಳಲ್ಕೆರೆಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಿ.ಓ.ಸದಾಶಿವಪ್ಪ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಮಾರಂಭದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಕುರಿತು ಉಪನ್ಯಾಸ ನೀಡಿದರು.ಹಡಪದ ಅಪ್ಪಣ್ಣ ಅವರು ವಚನ ಚಳುವಳಿಯ ಮೂಲಕ ಬಸವಣ್ಣನವರ ಯಶಸ್ಸಿನ ಹಿಂದಿನ ಶಕ್ತಿಯಾಗಿ ಗುರುತಿಸಿಕೊಂಡಿದ್ದರು.  ಸರ್ಕಾರದಿಂದ ಶಿವಶರಣ ಹಡಪದ ಅಪ್ಪಣ್ಣ ಸಂಶೋಧನಾ ಪೀಠ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ ಹಡಪದ ಅಪ್ಪಣ್ಣ ಅವರ ವಚನಗಳ ಜತೆಗೆ ಅವರ ಧರ್ಮಪತ್ನಿ ಲಿಂಗಮ್ಮನವರ 114 ವಚನಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಲಿಂಗಮ್ಮನವರ ವಚನಗಳು ನೇರ, ನಿಷ್ಠುರ ಹಾಗೂ ಕಠೋರವಾಗಿದೆ. ಯಾವುದೇ ಸಂಕೋಚವಿಲ್ಲದೇ ನಿರ್ಭಿತಿಯಿಂದ ಇರುವ ವಿಚಾರವನ್ನು ನೇರವಾಗಿ ತಮ್ಮ ವಚನಗಳಲ್ಲಿ ಹೇಳಿದ್ದಾರೆ ಎಂದು ಹೇಳಿದರು. ನಿಜಶರಣ ಹಡಪದ ಅಪ್ಪಣ್ಣನವರ ವಚನ ಸಾಹಿತ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, ಭಾರತೀಯ ಇತಿಹಾಸದಲ್ಲಿ 12ನೇ ಶತಮಾನ ಪ್ರಮುಖ ಘಟ್ಟ ಎಂದೇ ಗುರುತಿಸಲ್ಪಡುತ್ತದೆ. ವೈಚಾರಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾಂತ್ರಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿತು.   ಬದುಕಿನ ನೀತಿ ಹಾಗೂ ರೀತಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳಲ್ಲಿ ಸರಳ ಭಾಷೆಯ ಮೂಲಕ ತಿಳಿಸಲಾಯಿತು. ಜಾತಿ ಪದ್ದತಿಯನ್ನು ತೊಡೆದು ಹಾಕಲು ಪ್ರಯತ್ನಿಸಲಾಯಿತು. ಕಾಯಕ ಮಹತ್ವದ ಸಾರಿದ ಬಸವಣ್ಣನವರು ಅನುಭವ ಮಂಟಪದಲ್ಲಿ ಇದ್ದ ಪ್ರತಿಯೊಬ್ಬ ಶರಣ ಶರಣೆಯರು ಕಾಯಕ ಮಾಡಲು ಪ್ರೋತ್ಸಾಹಿಸಿದರು. ಹಡಪದ ಅಪ್ಪಣ್ಣ ಬಸವಣ್ಣನವರ ಜೊತೆ ನಿಂತು ಸಮಾಜದ ಸುಧಾರಣೆಗೆ ತಮ್ಮದೇ ಆದೇ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.  ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಅಧ್ಯಕ್ಷ ಬಿ.ಕೆ.ಜಯಪ್ಪ,  ತಾಲ್ಲೂಕು ಅಧ್ಯಕ್ಷ ವೃಷಬೇಂದ್ರ, ಖಜಾಂಚಿ ಉಮಾಪತಿ, ನಿರ್ದೇಶಕ ಪಿ.ಆರ್.ಸಿದ್ದಪ್ಪ, ಕೆಪಿಎಂ ಗಣೇಶಯ್ಯ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಮುಖಂಡರು ಹಾಗೂ ಗಣ್ಯರು ಇದ್ದರು. ಗಂಗಾಧರ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.