
(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಸೆ15: ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜೀಯವರಿಗೆ ಸುಮಾರು ಸಲ ಜೀವ ಬೆದರಿಕೆ ಪತ್ರ ಬಂದಿರುವ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇನೆಂದು ಬೆಳಗಾವ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಭೇಟಿ ನೀಡಿ ಸ್ವಾಮಿಜಿಯವರೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಸುಧಾರಣೆಗೆ ಮುಂದಾಗ ಮತ್ತು ಮೌಢ್ಯಗಳನ್ನು ಬಿಟ್ಟು ಹೊರಗೆ ಬನ್ನಿ ಎಂದು ಮಾನವಕುಲಕ್ಕೆ ಹೇಳಿದಾಗ ಇಂತಹ ಜೀವ ಬೆದರಿಕೆಗಳು ಸಹಜ. ಆದರೆ ನಾನು ಸಹ ಸಮಾಜದ ಪರಿವರ್ತನೆ ಹಾಗೂ ಮೌಢ್ಯಗಳ ವಿರುದ್ಧವಾಗಿದ್ದೇನೆ. ನನಗೆ ಯಾವುದೇ ಜೀವ ಬೆದರಿಕೆಗಳು ಬಂದಿಲ್ಲವೆಂದರು. ಈ ರೀತಿ ಬೆದರಿಕೆಗಳು ಬಂದಾಗ ಸರ್ಕಾರ, ಕಾನೂನು, ಪೋಲಿಸ ಇಲಾಖೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆಂದು ಹೇಳಿದರು.
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಕಂಟಕ ಬಂದೆ ಬರುತ್ತದೆ. ಆದರೆ ನಾವು ಜಾಗೃತರಾಗಬೇಕು. ಹೋರಾಟ ಮುಂದುವರೆಸಬೇಕು. ನಿಜಗುಣಾನಂದ ಶ್ರೀಗಳು ಬಸವ,ಅಂಬೇಡ್ಕರ, ಬುದ್ದರ, ತತ್ವಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಸಹ ಅದೇ ಕೆಲಸ ಮಾಡುತ್ತಿದ್ದೇವೆ. ಅವರ ಹೋರಾಟ ನಮ್ಮ ಹೋರಾಟ ಒಂದೇ ಅದಕ್ಕಾಗಿ ಮೇಲಿಂದ ಮೇಲೆ ಶ್ರೀಗಳ ಭೇಟಿಯಾಗುತ್ತೇನೆಂದು ಹೇಳಿದರು.
ಈ ವೇಳೆ ಕಾಂಗ್ರೇಸ್ ಮುಖಂಡರು, ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಗ್ರಾಮಸ್ಥರಿದ್ದರು.