ಸಮಾಜ ಮುಖಿಯಾಗಿ ಜಾಗೃತಿ ಮೂಡಿಸಲು ಕರೆ


ಸಂಜೆವಾಣಿ ವಾರ್ತೆ
ಹೊಸಪೇಟೆ,ಜೂ.3: ತಂಬಾಕು ಉತ್ಪನ್ನಗಳನ್ನು ಬಳಸಿ ಆರೋಗ್ಯ ಹಾಳುಮಾಡಿಕೊಳ್ಳುವುದನ್ನು ತಪ್ಪಿಸಲು ರಾಷ್ಟ್ರಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತದೆ. ಕಾರಾಗೃಹದಿಂದ ಹೊರಬಂದ ನಂತರ ತಾವುಗಳು ಸಹ ಸಮಾಜ ಮುಖಿಯಾಗಿ ಜಾಗೃತಿ ಮೂಡಿಸಬೇಕೆಂದು ಪ್ರಧಾನ ಹಿರಿಯ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಕಿಶನ್ ಮಾಡಲಗಿ ಸಲಹೆ ನೀಡಿದರು.
ಹೊಸಪೇಟೆಯ ತಾಲ್ಲೂಕು ಕಾರಾಗೃಹ ಮತ್ತು ಸುಧಾರಣ ಸೇವೆ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ವಿಶ್ವ  ತಂಬಾಕು ರಹಿತ ದಿನಾಚರಣೆ ಅಂಗವಾಗಿ  ಉಪಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರಾಗೃಹ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಬಳಕೆ ಕಟ್ಟುನಿಟ್ಟಾಗಿ ನಿಷೇಧವಿದೆ. ಈ ಹಿಂದೆ ತಂಬಾಕು ಬಳಸುವವರು ಆರೋಗ್ಯ ಸಮಲೋಚನೆ ನಂತರ ವ್ಯಸನವನ್ನು ತ್ಯಜಿಸಿದ್ದಾರೆ. ತಾವುಗಳು ಕಾರಾಗೃಹದಿಂದ ಬಿಡುಗಡೆ ಹೊಂದಿದ ನಂತರ ಸಮಾಜಮುಖಿಯಾಗಿ ಇತರರಿಗೂ ಜಾಗೃತಿ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ವೈದ್ಯಾಧಿಕಾರಿ ಡಾ.ಸೋಮಶೇಖರ್ ಅವರು ತಂಬಾಕು ಬಳಕೆಯ ದುಷ್ಪಾರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ವ್ಯಕ್ತಿಯೊಬ್ಬ ಮಾನಸಿಕ ಖಿನ್ನತೆಗೆ ಒಳಗಾದಾಗ ದುಶ್ಚಟಗಳಿಗೆ ದಾಸನಾಗುವ ಸಂಭವ ಇರುತ್ತದೆ. ಅನುವಂಶಿಕ ಕಾರಣದಿಂದಲೂ ವ್ಯಸನ ದುಶ್ಚಟವಾಗುವ ಸಂಭವ ಹೆಚ್ಚಿರುತ್ತದೆ. ಸ್ವಯಂ ಜಾಗೃತಿಯಿಂದ ವ್ಯಸನ ಮುಕ್ತನಾಗಬಹುದು ಎಂದು ತಿಳಿಸಿದರು.
ಪ್ರಾರಂಭಿಕವಾಗಿ ವ್ಯಸನವನ್ನು ತ್ಯಜಿಸುವುದು ಕಷ್ಟವಾಗುತ್ತದೆ. ಇಂತವರಿಗಾಗಿ ಆರೋಗ್ಯ ಇಲಾಖೆಯಿಂದ ವ್ಯಸನಮುಕ್ತ ಕೇಂದ್ರ ಸ್ಥಾಪಿಸಿ ಆಪ್ತ ಸಮಾಲೋಚನೆ ಕೈಗೊಳ್ಳಲಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಉಪಕಾರಾಗೃಹದ ಅಧೀಕ್ಷಕ ಎಮ್.ಹೆಚ್.ಕಲಾದಗಿ ಅವರು ವಹಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಸವರಾಜು, ವಕೀಲರ ಸಂಘದ ಎ.ಕರುಣಾನಿಧಿ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಮಾರೇಶ ಜಿ. ಹಾಗೂ ಅಂಜಲಿ ಬೆಳಗಲ್ ಹಾಜರಿದ್ದರು.