
ಕಲಬುರಗಿ,ಆ.16: ಯಾವುದೇ ಒಂದು ದೇಶವಾಗಲೀ, ಸಮಾಜ ಮತ್ತು ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಇರುವುದು ಸಾಹಿತ್ಯದಲ್ಲಿ ಮಾತ್ರ ಎಂದು ವೈದ್ಯ ಲೇಖಕ ಡಾ. ಎಸ್.ಎಸ್.ಪಾಟೀಲ ಮಂದರವಾಡ ಅಭಿಪ್ರಾಯಿಸಿದರು.
ನಗರದ ಕನ್ನಡ ಭವನದಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ `ಸ್ವಾತಂತ್ರ್ಯ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಕಾವ್ಯವಾಗಿಸಿ ಜನರನ್ನು ಜಾಗೃತಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿಯ ಸಾಂದರ್ಭಿಕ ಸಂದರ್ಭಗಳನ್ನು ಸಮಪ್ಕವಾಗಿ ಬಳಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದು ಮಹಿಳೆಯರ ಮೇಲಾಗುತ್ತಿರುವ ನಾನಾ ರೀತಿಯ ದೌರ್ಜನ್ಯಗಳನ್ನು ತಡೆಯುವಂಥ ನಿಟ್ಟಿನಲ್ಲಿ ಕವಿಗಳು ಕಾವ್ಯ ರಚನೆ ಮಾಡಬೇಕಾಗಿದೆ. ನಮ್ಮಲ್ಲಿನ ಮೌಲ್ಯಾಧಾರಿತ ಬರಹಗಳು ಜಾತಿ, ಧರ್ಮದ ಎಲ್ಲ ಮೇರಿ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುತ್ತವೆ. ಅಂಥ ಸಾಮಾಜಿಕ ಕಳಕಳಿಯಿಂದ ಕೂಡಿರುವ ಸಾಹಿತ್ಯ ನಮ್ಮದ್ದಾಗಬೇಕೆಂದರು.
ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ, ಇಂದಿನ ಆಧುನಿಕತೆಯ ಮೋಡಿಯಲ್ಲಿ ಯುವ ಜನಾಂಗ ನಮ್ಮ ಕಲೆ, ಸಾಹಿತ್ಯ, ಸಂಗೀತ, ಮೊದಲಾದವುಗಳಿಂದ ದೂರವಾಗುತ್ತಿದ್ದಾರೆ. ಆದ್ದರಿಂದ ಇಂಥ ಕಾರ್ಯಕ್ರಮಗಳು ಆಗಾಗ ಆಯೋಜಿಸುವ ಮೂಲಕ ಸಾಹಿತ್ಯದ ಕಡೆಗೆ ಯುವ ಜನರ ಒಲವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕಿ ರಜನಿ ಪಾಟೀಲ ಮಾತನಾಡಿ, ಅತ್ಯಂತ ಪ್ರಾಚೀನ ಭಾಷೆಯಲ್ಲೊಂದಾದ ನಮ್ಮ ಕನ್ನಡ ಭಾಷೆ ಶ್ರೀಮಂತಿಕೆಯಿಂದ ಕೂಡಿದ್ದು, ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ ಎಂದರು.
ಸಂಗೀತ ಕಲಾವಿದ ಡಾ. ಶಿವಶಂಕರ ಬಿರಾದಾರ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಮಾಯಣ್ಣವರ್, ವಿಶ್ವನಾತ ಯನಗುಂಟಿ ಮಾತನಾಡಿದರು. ಕವಿತಾ ಕಾವಳೆ ಪ್ರಾರ್ಥನೆ ಗೀತೆ ಹಾಡಿದರು. ಕವಿಗಳಾದ ನರಸಿಂಗರಾವ ಹೇಮನೂರ, ರೇಣುಕಾ ಹಿರೇಗೌಡ, ಆರ್.ಹೆಚ್.ಪಾಟೀಲ, ಹಣಮಂತರಾವ ಘಂಟೇಕರ್, ಸುರೇಖಾ ಜೇವರ್ಗಿ, ಸಂತೋಷ ಕುಂಬಾರ, ಉಷಾ ಗೊಬ್ಬೂರ, ಸವಿತಾ ಪಾಟೀಲ ಸೊಂತ, ಚಂದ್ರಕಲಾ ಪಾಟೀಲ, ಮಹಾದೇವ ಬಡಾ ಸೇರಿದಂತೆ ಅನೇಕರು ಕವನ ವಾಚಿಸಿ ಇಂದಿನ ಸಮಾಜದಲ್ಲಿನ ಭ್ರಚ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ದೇಶಾಬಿಮಾನ, ಕನ್ನಡ ಭಾಷೆಯ ವೈಭವ … ಹೀಗೆ ಅನೇಕ ಪ್ರಚಲಿತ ವಿದ್ಯಮಾನಗಳ ಮೇಲೆ ಉತ್ತಮ ಬೆಳಕು ಚೆಲ್ಲುವ ಕಾರ್ಯ ಮಾಡಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.