ಸಮಾಜ ಪರಿವರ್ತನೆಯ ಹೊಣೆ ಯುವಕರಮೇಲಿದೆ

ಧಾರವಾಡ ಜ.13: ವಿವೇಕಾನಂದರ ವಿಚಾರಗಳು ಯುವಕರಿಗೆ ಪ್ರೇರಣೆ’ ಎಂದು ಡಾ. ಜಗದೀಶ ಬರಗಿ ಹೇಳಿದರು.
ಸ್ಥಳೀಯ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಧಾರವಾಡದ ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಕರ್ನಾಟಕ ವಿಶ್ವವಿದ್ಯಾಲಯ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಕಾಲೇಜಿನ ಸ್ವಾಮಿ ವಿವೇಕಾನಂದ ಫೋರಂ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾನವ ಹಕ್ಕುಗಳ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
‘ವಿವೇಕಾನಂದರ ವಿಚಾರಗಳು ಸದಾ ಯುವಕರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿ ಉಳಿದಿದೆ. ಯುವಕರು ತಮ್ಮ ಗುರಿಯನ್ನು ತಿಳಿದು ಆ ನಿಟ್ಟಿನಲ್ಲಿ ಶ್ರಮಿಸಿ, ಯಶಸ್ಸನ್ನು ಪಡೆಯಬೇಕು. ಸಮಾಜದ ಬದಲಾವಣೆ ಯುವಕರ ಹೊಣೆಯಾಗಿದೆ. ಭಾರತದಲ್ಲಿ ಇಂತಹ ಅನೇಕ ಆದರ್ಶ ಪುರುಷರು ತಮ್ಮ ವಿಚಾರಗಳನ್ನು ಧಾರೆಯೆರೆದು ಕೊಟ್ಟಿದ್ದಾರೆ. ಅವರ ಜೀವನವೇ ಯುವಕರಿಗೆ ಸಂದೇಶವಾಗಿದೆ. ಇಂತಹ ಮಹಾಪುರುಷರ ಜಯಂತಿ ಆಚರಣೆ ಉದ್ದೇಶ ವಿದ್ಯಾರ್ಥಿಗಳಿಗೆ ಅವರ ಆದರ್ಶಗಳನ್ನು ಅರಿವು ಮಾಡಿಕೊಡುವುದಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಜನವೇರಿ 12, 1985 ರಿಂದ ‘ರಾಷ್ಟ್ರೀಯ ಯುವ ದಿನಾಚರಣೆ’ಯಾಗಿ ಆಚರಿಸಬೇಕೆಂದು ಘೋಷಿಸಿದೆ. ಇಂದಿನಿಂದ ಒಂದು ವಾರ ಕಾಲ ‘ಯುವ ಸಪ್ತಾಹ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವೇಕಾನಂದರು ತಮ್ಮ ವಿಚಾರವನ್ನು ಮತ್ತು ದೇಶ ಭಕ್ತಿಯನ್ನು ಮೂಡಿಸಲು ಇಡೀ ಭಾರತವನ್ನು ಸಂಚರಿಸಿ, ಯುವ ಪೀಳಿಗೆಯನ್ನು ಎಚ್ಚರಗೊಳಿಸಿ, ಪಾಶ್ಚಾತ್ಯ ಜನರಿಗೆ ತಮ್ಮ ಪರಂಪರೆ ಬಗ್ಗೆ ಅರಿವು ಮಾಡಿಕೊಟ್ಟಂತಹ ವೀರ ಸನ್ಯಾಸಿಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ನೆಹರು ಯುವ ಕೇಂದ್ರದ ನಿರ್ದೇಶಕರಾದ ಗೌತಮ ರೆಡ್ಡಿ ಮತ್ತು ಹಣಕಾಸು ಅಧಿಕಾರಿ ಅನಿಲ ಪೂರಾಣಿಕ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹನಿರ್ದೇಶಕರಾದ ಪ್ರಕಾಶ ಎಂ. ಸರಶೆಟ್ಟಿ, ಕಾಲೇಜಿನ ಸ್ವಾಮಿ ವಿವೇಕಾನಂದ ಫೋರಂನ ಸಂಚಾಲಕರಾದ ಆರ್. ಎಂ. ಪತ್ತಾರ, ಎನ್.ಎಸ್.ಎಸ್. ಅಧಿಕಾರಿಗಳಾದ ಎಸ್.ಕೆ. ಸಜ್ಜನ, ಡಾ. ಆರ್.ಟಿ. ಮಹೇಶ, ಎಸ್.ಎಸ್. ಶಾನವಾಡ, ಡಾ. ಶೌಕತ ಅಲಿ, ಜಿನೇಂದ್ರ ಕುಂದಗೋಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.