ಸಮಾಜ ಪರಿವರ್ತನೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟ ಶರಣ ಹಡಪದ ಅಪ್ಪಣ್ಣ :ಮುರಗಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.4: ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಲಗಿಸಲು ಸಮಾಜೋದ್ಧಾರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟವರು ಹಡಪದ ಅಪ್ಪಣ್ಣನವರು. ಇವರ ಆದರ್ಶಮಯ ಬದುಕು ಹಾಗೂ ಅನುಸರಿಸಿದ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ (ಜು.03)ರಂದು ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಬಸವಣ್ಣನವರ ಸಮಕಾಲಿನರಾದ ಹಡಪದ ಅಪ್ಪಣ್ಣನವರು ಬಸವಣ್ಣವರನ್ನು ಆರಾಧಿಸುತ್ತ ಅವರ ಆಚಾರ, ವಿಚಾರ, ಬದುಕಿನ ರೀತಿ-ನೀತಿ, ನಡೆ-ನುಡಿಗಳ ಪ್ರಭಾವದಿಂದ ಪ್ರಭಾವಿತರಾಗಿ ಸಮಾಜದಲ್ಲಿನ ಓರೆಕೋರೆಗಳನ್ನು ತೊಡೆದು ಹಾಕಲು ಹಾಗೂ ಅಸಮಾನತೆಯನ್ನು ತೊಲಗಿಸಿ, ಸಹಬಾಳ್ವೆ, ಸಮಾನತೆ, ಸಾಮರಸ್ಯ,ಸದ್ವಿಚಾರಳುಳ್ಳ ದಾರ್ಶನಿಕ ಗುಣಮೌಲ್ಯ ಬಿತ್ತರಿಸುವ ಮೂಲಕ ಸಮಾಜದ ಏಳ್ಗೆಯಲ್ಲಿ ಹಡಪದ ಅಪ್ಪಣ್ಣನವರ ಕಾಯಕ ಮಹತ್ತರವಾಗಿದೆ.ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರು ಸಮಾಜಕ್ಕೆ ಸೀಮಿತವಾಗದೇ, ಅವರು ಈ ಸಮಾಜದ ಆಸ್ತಿ ಎಂದು ಅಭಿಪ್ರಾಯಪಟ್ಟರು.
ಸಿಕ್ಯಾಬ್ ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ಮೇತ್ರಿ ಅವರು ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ನೀಡಿ, ಶರಣ ಸಂಕುಲದ ಧ್ರುವತಾರೆಯಾದ ಅಪ್ಪಣ್ಣವನವರು ಧೈರ್ಯ, ಕಾಯಕ ನಿಷ್ಠೆಗೆ ಮಾದರಿಯಾಗಿದ್ದರು.ಸುಮಾರು 246ಕ್ಕಿಂತ ಹೆಚ್ಚು ವಚನಗಳನ್ನು ಹಾಗೂ ಕ್ಲಿಷ್ಟಕರವಾದ ವಚನಗಳನ್ನು ಸರಳತೆ ರೂಪದಲ್ಲಿ ಪರಿವರ್ತಿಸುವ ಪ್ರಯತ್ನ ಮಾಡಿದವರು. ಇವರು ಕನ್ನಡ ಮತ್ತು ಸಂಸ್ಕೃತ ಭಾಷೆ ಬಲ್ಲವರಾಗಿದ್ದು,ಆತ್ಮಜ್ಞಾನವುಳ್ಳವರಾಗಿದ್ದರು. ಬಸವಣ್ಣನವರ ಕಾಯಕ ತತ್ವ ಅನುಸರಿಸಿ ಪಾಲಿಸುವುದರ ಜೊತೆಗೆ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ಹಡಪದ ಅಪ್ಪಣ್ಣನವರ ಆದರ್ಶ, ಅವರ ವಚನಗಳು ಬದುಕಿಗೆ ಸ್ಫೂರ್ತಿದಾಯಕ. ಕಾಯಕ ತತ್ವದ ಶರಣರ ವಚನಗಳನ್ನು ಅರಿತುಕೊಂಡು ಆದರ್ಶಮಯ ಬದುಕು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ಹಾಗೂ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರು ಎಸ್.ಎಸ್.ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕÁರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ್, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಯಾದ ಶ್ರೀಮತಿ ಅನುಸೂಯ ಚಲವಾದಿ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಸವರಾಜ ಶಿವಶರಣ, ಚಂದ್ರಶೇಖರ ಹಡಪದ, ದಶರಥ ನಾವಿ, ವಿಠ್ಠಲ ನಾವಿ, ನಾಗರತ್ನ ನಾವಿ, ಭಾರತಿ ನಾವಿ, ಶಿವಾನಂದ ಹಡಪದ,ದೇವೆಂದ್ರ ಮಿರೇಕರ,ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ ಸೇರಿದಂತೆ ಸಮಾಜದ ಮುಖಂಡರು,ಸಾರ್ವಜನಿಕರು ಉಪಸ್ಥಿತರಿದ್ದರು. ದಾನಮ್ಮ ಕೋರಿ ಸುಮಧುರ ವಚನ ಗಾಯನ ಪ್ರಸ್ತುತಪಡಿಸಿದರು.
ಮೆರವಣಿಗೆಗೆ ಚಾಲನೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 9.30 ಗಂಟೆಗೆ ಆರಂಭವಾದ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಚಾಲನೆ ನೀಡಿದರು.
ಭವ್ಯ ಮೆರವಣಿಗೆಯು ವಿವಿಧ ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.