
(ಸಂಜೆವಾಣಿ ವಾರ್ತೆ
ಅಫಜಲಪುರ:ಜು.2: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಅಧಿಕಾರಿಗಳು ಕೂಡಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಎಂದು ಮಹಾನಾಯಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಗಂಭೀರ ಆರೋಪ ಮಾಡಿದ್ದಾರೆ.
ಇಲಾಖೆಯ ತಾಲೂಕು ಅಧಿಕಾರಿ ವಿಜಯಲಕ್ಷ್ಮಿ ಹಾಗೂ ಪ್ರಥಮ ದರ್ಜೆ ಸಹಾಯಕ ಶ್ರೀಶೈಲ ಸಾಲೋಟಗಿ ಅವರು ಇಲಾಖೆಯ ಎಲ್ಲಾ ಲೆಕ್ಕ ಶೀರ್ಷಿಕೆವಾರು, ತಿಂಗಳಿನ ಖರ್ಚು ವೆಚ್ಚಗಳು, ಎಂ.ಇ.ಎಸ್ ಮತ್ತು 62 ಬಿ ಇದರಲ್ಲಿ ಯಾವುದೇ ರಶೀದಿ ಅಥವಾ ಇತರೆ ಬಿಲ್ ಬುಕ್ ಗಳ ದಾಖಲೆ ಸೃಷ್ಟಿಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಸಾರ್ವಜನಿಕರ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಇವರು ಹಿಂದೇಟು ಹಾಕಿ ರಾಜಕೀಯ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದಾರೆ. ಸಿಪಾಯಿ ಹಾಗೂ ಅಡುಗೆ ಸಹಾಯಕ ಹುದ್ದೆಯಲ್ಲಿ ಕೆಲಸ ಮಾಡುವವರಿಂದ ತಿಂಗಳಿಗೆ ಇಂತಿಷ್ಟು ಹಣ ಕೊಡಬೇಕೆಂದು ರಾಜಿ ಮಾಡಿಕೊಂಡು ವಸತಿ ನಿಲಯದ ಮೇಲ್ವಿಚಾರಕರ ಹುದ್ದೆಗೆ ಆದೇಶ ನೀಡಿರುತ್ತಾರೆ. ಇಬ್ಬರು ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ತಮಗೆ ಬೇಕಾದ ಅನುಕೂಲಕರ ರೀತಿಯಲ್ಲಿ ಕಚೇರಿ ನಡೆಸುತ್ತಿದ್ದಾರೆ. ಹೀಗಾಗಿ ಸದರಿ ಅಧಿಕಾರಿಗಳನ್ನು ಸೇವೆಯಿಂದ ವಜಗೊಳಿಸಬೇಕು. ಹಾಗೂ ಈ ಅಧಿಕಾರಿಗಳ ವೇತನವನ್ನು ಕೂಡಲೇ ತಡೆ ಹಿಡಿಯಲು ಆದೇಶ ಮಾಡಿ ಸೂಕ್ತ ತನಿಖೆ ಮಾಡಬೇಕೆಂದು ಮನವಿ ಮಾಡಿದ್ದಾರೆ.