ಸಮಾಜ ಒಡೆವ ಕೆಲಸ ಮಾಡೋದು ಬೇಡ: ಡಿಕೆಶಿ

ಬೆಂಗಳೂರು:ನ.16- ರಾಜ್ಯದ ಎಲ್ಲ ಜನರಿಗೂ ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಅದನ್ನು ಬಿಟ್ಟು ಆದರೆ ಜಾತಿ, ಸಮುದಾಯದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

‘ಎಲ್ಲ ಸಮುದಾಯದ ಜನರನ್ನು ನಾವು ಗೌರವಯುತವಾಗಿ ನೋಡಬೇಕು ಎಂದು ಸಂವಿಧಾನದಲ್ಲಿ ತಿಳಿಸಿದೆ. ಇಷ್ಟು ದಿನ ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಇಷ್ಟು ದಿನ ಮರಾಠರ ಬಗ್ಗೆ ಕಾಳಜಿ ಇರಲಿಲ್ಲವೇ? ಮರಾಠರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಸಮುದಾಯದವರ ಏಳಿಗೆಗೆ ಹಾಗೂ ಜನರಿಗೆ ಒಳ್ಳೆಯದು ಮಾಡಿದರೆ ನಾವು ಬೆಂಬಲ ನೀಡುತ್ತೇವೆ. ಆದರೆ ಅದರ ಹಿಂದೆ ಸಮಾಜವನ್ನು ವಿಭಜಿಸುವ ಉದ್ದೇಶ ಇರುವುದು ಸರಿಯಲ್ಲ ಎಂದಿದ್ದಾರೆ

ಬಿಜೆಪಿ ಮೊದಲಿನಿಂದಲೂ ಸಮಾಜ ಒಡೆಯುವ ಕೆಲಸವನ್ನೇ ಮಾಡಿಕೊಂಡು ಬರುತ್ತಿದೆ. ಮರಾಠಿಗರನ್ನು ಪ್ರತ್ಯೇಕವಾಗಿ ನೋಡುವ ಅಗತ್ಯ ಏನಿದೆ? ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಸದ್ಯ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ

ಕೇಂದ್ರದಿಂದ ರಾಜ್ಯದ ನಿರ್ಲಕ್ಷ್ಯ:

ರಾಜ್ಯ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರೂ ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ಚುನಾವಣೆ ಎದುರಾದ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರದ ಆದ್ಯತೆಯೇ ಹೊರತು ಕರ್ನಾಟಕ ರಾಜ್ಯವಲ್ಲ ಎಂದಿದ್ದಾರೆ

ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರದ ಬಳಿ ಮಾತನಾಡಲು ಬಿಜೆಪಿ ನಾಯಕರಿಗೆ ಧ್ವನಿ ಇಲ್ಲವಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ಅವರನ್ನು ಕರೆದುಕೊಂಡು ಹೋದಾಗ ಬಾಯಿ ಬಿಡುತ್ತಿರಲಿಲ್ಲ. ಕೇಂದ್ರದಿಂದ ನೆರವು ಪಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ‌ ಎಂದರು

ಶೀಘ್ರ ತೀರ್ಮಾನ:

ರಾಜ್ಯ ಸಭೆಯ ಒಂದು ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ. ಇದು ಬಿಜೆಪಿ ಅವರ ಚುನಾವಣೆ. ಇಲ್ಲಿ ಬಹಿರಂಗ ಮತದಾನ ನಡೆಯುತ್ತದೆ. ನಮ್ಮ ಬಳಿ ಎಷ್ಟು ಸಂಖ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಅಭ್ಯರ್ಥಿ ನಿಲ್ಲಿಸಬೇಕೆ, ಬೇಡವೇ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು

ಮೈತ್ರಿ ಗೊತ್ತಿಲ್ಲ:

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ಬೇರೆ ಪಕ್ಷದಿಂದ ಅಧಿಕೃತ ತೀರ್ಮಾನ ಬರುವವರೆಗೂ ನಾನು ಮಾತನಾಡುವುದು ಸೂಕ್ತ ಅಲ್ಲ. ಅವರ ರಾಜಕೀಯ ಲಾಭ, ತಂತ್ರಗಾರಿಕೆ ಅವರಿಗೆ ಬಿಟ್ಟ ವಿಚಾರ. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ ಎಂದಿದ್ದಾರೆ. ಯಾವ ಜಿಲ್ಲೆಯಲ್ಲಿ ಯಾವ ಸ್ಥಿತಿ ಇದೆ ಎಂದು ನಾವು ಹತ್ತಿರದಿಂದ ನೋಡುತ್ತಿದ್ದೇವೆ. ಅವರು ಯಾವ ಅಭ್ಯರ್ಥಿ ನಿಲ್ಲಿಸುತ್ತಾರೆ, ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದನ್ನೂ ನೋಡಿ ನಾವು ಮಾತನಾಡುತ್ತೇವೆ. ಈ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದು ಆತುರವಾಗಲಿದೆ ಎಂದರು.

ವೇತನ ನೀಡಬೇಕು: ಸರ್ಕಾರ ಸಾರಿಗೆ ನೌಕರರಿಗೆ ಮೂರು ತಿಂಗಳಿನಿಂದ ಸಿಬ್ಬಂದಿಗೆ ವೇತನ ನೀಡದೆ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ವೇತನ ನೀಡದಿದ್ದರೆ ಅವರ ಜೀವನ ಸಾಗಿಸುವುದಾದರೂ ಹೇಗೆ? ಯಾವುದಾದರೂ ಒಂದು ಯೋಜನೆ ನಿಲ್ಲಿಸಿ ಅವರಿಗೆ ವೇತನ ಕೊಡಲಿ ಎಂದಿದ್ದಾರೆ.