
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಫೆ.27 :- ಸಹೋದರರಿಬ್ಬರು ನಡೆಸುತ್ತಿರುವ ಆರೋಗ್ಯ ಶಿಬಿರ ಸೇರಿದಂತೆ ಇತರೆ ಸಮಾಜಸೇವೆಗಳಿಗೆ ತಂದೆ ದಿವಂಗತ ಎನ್ ಟಿ ಬೊಮ್ಮಣ್ಣ ಅವರೇ ಸ್ಫೂರ್ತಿದಾಯಕರು ಎಂದು ಡಾ.ಶ್ರೀನಿವಾಸ ತಮ್ಮ ಮನದಾಳದ ಮಾತನ್ನು ತಿಳಿಸಿದರು.
ಅವರು ಮಾಜಿ ಶಾಸಕ ದಿ.ಎನ್.ಟಿ.ಬೊಮ್ಮಣ್ಣ ಅವರ ಸ್ಮರಣಾರ್ಥವಾಗಿ ತಾಲೂಕಿನ ಕಾನಹೊಸಹಳ್ಳಿಯ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಡಾ.ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದಿಂದ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ತಂದೆಯವರಾದ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರು ತಾಲೂಕಿನ ಮೂಲೆಕಟ್ಟಿನ ಮತ್ತು ಕುಗ್ರಾಮಗಳಿರುವ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಬಡವರ ಮಕ್ಕಳಿಗೆ ಶಿಕ್ಷಣ ಕಲಿಕೆಗೆ ಆಸರೆಯಾಗಿದ್ದಾರೆ. ಇಂತಹ ಕುಟುಂಬದಲ್ಲಿ ಹುಟ್ಟಿದ ಎನ್ ಟಿ ತಮ್ಮಣ್ಣ ಹಾಗೂ ನಾನು ಜೊತೆ ಸೇರಿ ತಂದೆಯ ಜನಪರ ಕಾಳಜಿಯಂತೆ ಅವರು ಶಿಕ್ಷಣಕ್ಕೆ ಮಹತ್ವ ಕೊಟ್ಟಂತೆ ನಾವು ಜನರ ಆರೋಗ್ಯ ಕಾಳಜಿ ಇಟ್ಟುಕೊಂಡು ಕೂಡ್ಲಿಗಿ ತಾಲೂಕಿನ ಹೋಬಳಿವಾರು ಜಿಲ್ಲಾಪಂಚಾಯತಿ ವ್ಯಾಪ್ತಿಯಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ನೇತ್ರತಜ್ಞ ಡಾ.ಎನ್.ಟಿ.ಶ್ರೀನಿವಾಸ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ ಐಮಡಿ ಶರಣಾರ್ಯರು ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗೆ ಅತ್ಯಂತ ಸಹಕಾರಿಯಾಗಲಿವೆ. ಇಂತಹ ಆಲೋಚನೆಯಿಂದ ಜನರ ಆರೋಗ್ಯದ ಕಾಳಜಿಗೆ ಮುತುವರ್ಜಿ ವಹಿಸಿರುವ ಡಾ.ಎನ್.ಟಿ.ಶ್ರೀನಿವಾಸ್ ಅವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ ಮಾತನಾಡಿ ಆರೋಗ್ಯವೇ ಮಹಾ ಭಾಗ್ಯ ಎನ್ನುವುದನ್ನು ಅರಿತು ಜನರು ಜೀವನ ನಡೆಸಬೇಕಿದೆ. ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಕೂಡ್ಲಿಗಿ ಕ್ಷೇತ್ರದಲ್ಲಿ ಜನರ ಆರೋಗ್ಯದ ಕಾಳಜಿಗೆ ಹೆಚ್ಚಿನ ಮಹತ್ವವಿರುವ ಕಾರಣ ಆರೋಗ್ಯ ತಪಾಸಣಾ ಶಿಬಿರಗಳನ್ನು ಡಾ ಶ್ರೀನಿವಾಸ ಅವರು ತಂದೆಯ ಸ್ಮರಣಾರ್ಥ ಆಯೋಜಿಸಿದ್ದು ಹೆಚ್ಚಿನ ಜನರು ಈ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದರು
ತಾಪಂ ನಿವೃತ್ತ ಇಒ ಜಿ.ಎಂ.ಬಸಣ್ಣ, ಮುಖಂಡರಾದ ಕೋಗಳಿ ಮಂಜುನಾಥ, ಕೃಷ್ಣನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಎ.ಚನ್ನಬಸಪ್ಪ, ಜಗದೀಶ್, ಕೂಡ್ಲಿಗಿಯ ನಿವೃತ್ತ ದೈಹಿಕ ಶಿಕ್ಷಕ ಡಿ.ನಾಗರಾಜ ಮೇಷ್ಟ್ರು, ಕೆ.ಎನ್.ದಿನಕರ್, ಶಫಿವುಲ್ಲಾ, ಮಾದಿಹಳ್ಳಿ ನಜೀರ್, ಪಂಚಮಸಾಲಿ ಸಮುದಾಯದ ಮುಖಂಡ ಮರುಳಸಿದ್ಧಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವಿ. ತಮ್ಮಣ್ಣ, ಹೊಸಹಳ್ಳಿ ದುಗ್ಗಪ್ಪ, ಕೆ.ಎಂ.ಎಸ್ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎಂ.ಹರ್ಷವರ್ಧನ, ಬಸವರಾಜ ಸೇರಿ ಇತರರಿದ್ದರು. ಕಾರ್ಯಕ್ರಮದ ನಂತರ ಕಣ್ಣು, ಹೃದ್ರೋಗ, ಸ್ತ್ರೀರೋಗ, ಬಿಪಿ, ಶುಗರ್, ಮಕ್ಕಳ ಆರೋಗ್ಯ ತಪಾಸಣೆಯನ್ನು ವೈದ್ಯರಾದ ಡಾ. ರಶ್ಮಿ, ಡಾ ಶಿವಕುಮಾರ್, ಡಾ ತಿಮ್ಮರಾಜ್, ಡಾ ರಾಘವೇಂದ್ರ, ಡಾ ಸತೀಶ್,ಡಾ ರಾಜಶೇಖರ್ ಹಾಗೂ ಡಾ ಅಮೀನ್ ತಪಾಸಣೆ ನಡೆಸಿದರು ಹಾಗೂ ತಜ್ಞ ವೈದ್ಯರಾದ ಡಾ ಶ್ರೀನಿವಾಸ ತಾವು ಸಹ ಕಣ್ಣಿನ ತಪಾಸಣೆ ನಡೆಸುವಲ್ಲಿ ಮುಂದಾಗಿದ್ದರು. ಕಾನಹೊಸಹಳ್ಳಿಯಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಜಿಪಂ ವ್ಯಾಪ್ತಿಯ ಹಳ್ಳಿಗಳ ಒಂದು ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು. ತುಮಕೂರಿನ ಅಕ್ಷರ ಐ ಫೌಂಡೇಶನ್ ಆಸ್ಪತ್ರೆಯ ಸಿಬ್ಬಂದಿ ಸೇರಿ ಇತರರು ಶಿಬಿರದಲ್ಲಿ ಭಾಗವಹಿಸಿದ್ದರು..