
ವಾಡಿ:ಮಾ.25: ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಅವರ ಹುತಾತ್ಮ ದಿನಾಚರಣೆಯನ್ನು ರಾವೂರ ಗ್ರಾಮದಲ್ಲಿ, ಹಲಕರ್ಟಿಯ ಬಸವೇಶ್ವರ ಶಾಲೆಯಲ್ಲಿ ಹಾಗೂ ವಿವಿಧ ಶಾಲಾ ಕಾಲೇಜು ಮನೆಗಳಲ್ಲಿ ಹಳ್ಳಿಗಳಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳು ಮಹಾನ್ ಕ್ರಾಂತಿಕಾರಿಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ರಾವೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಡಿಎಸ್ ಓ ವಾಡಿ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ದೇವದುರ್ಗ ಮಾತನಾಡಿ ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಹೋರಾಟದ ಸ್ಪೂರ್ತಿ ಎಂದಿಗೂ ಜೀವಂತ. ನಮ್ಮ ದೇಶವನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ತನ್ನ 23 ನೇ ವಯಸ್ಸಿಗೆ ನಗುನಗುತ್ತಾ ಗಲ್ಗಂಭವನ್ನೇರಿದ ಭಗತ್ ಸಿಂಗ್ ಅವರ ಆದರ್ಶ ಮತ್ತು ಉದಾತ್ತ ವಿಚಾರಗಳು ಇಂದಿಗೂ ಪ್ರಸ್ತುತ ಎಂದರು.
ಭಗತ್ ಸಿಂಗ್ ಅವರು ಮಾನವನಿಂದ ಮಾನವನ ಮೇಲೆ ನಡೆಯುವ ಶೋಷಣೆ ಅಂತ್ಯ ವಾದಗಲೇ ನಮಗೆ ನಿಜವಾದ ಸ್ವಾತಂತ್ರ್ಯ ದೊರಕುವುದು ಎಂದು ಹೇಳಿದ್ದರು. ಇವರು ಹೇಳಿದ ಈ ಮಾತುಗಳು ಅತ್ಯಂತ ಪ್ರಸ್ತುತವಾಗಿದೆ. ಈ ದೇಶದ ಅತಿ ದೊಡ್ಡ ಶ್ರೀಮಂತರು ಬಡ- ಮಧ್ಯಮ ವರ್ಗದ ಸಾಮಾನ್ಯ ಜನರ ಮೇಲೆ ಶೋಷಣೆಯನ್ನು ಎಸಗುತ್ತಲೇ ಇದ್ದಾರೆ. ಪರಿಣಾಮ ಇಂದು ಶಿಕ್ಷಣದ ವ್ಯಾಪಾರೀಕರಣ, ಬಡತನ ನಿರುದ್ಯೋಗ ಹೀಗೆ ಹಲವು ಸಾಮಾಜಿಕ ಸಮಸ್ಯೆಗಳು ತಾಂಡವವಾಡುತ್ತಿದೆ. ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾದ ನಾವು ಈ ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ. ಅವರು ಕನಸು ಕಂಡ ಎಲ್ಲರಿಗೂ ಶಿಕ್ಷಣ, ಉದ್ಯೋಗ, ಹೆಣ್ಣು ಮಕ್ಕಳು ಘನತೆ ಗೌರವದಿಂದ ಬದುಕುವ ಸಮಾಜವಾದಿ ಭಾರತವನ್ನು ಕಟ್ಟಲು ವಿದ್ಯಾರ್ಥಿಗಳಾದ ನಾವು ಶ್ರಮಿಸಬೇಕಿದೆ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಎಐಡಿಎಸ್‍ಓ ನ ವಾಡಿ ಸ್ಥಳೀಯ ಕಾರ್ಯದರ್ಶಿಗಳಾದ ಗೋವಿಂದ ಯಳವಾರ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಗೋದಾವರಿ ಕಾಂಬ್ಳೆ, ಬಸವೇಶ್ವರ ಶಾಲೆಯ ಮುಖ್ಯ ಗುರುಗಳಾದ ಶರಣು ದೋಶೆಟ್ಟಿ, ಎಐಡಿಎಸ್ ಓ ವಾಡಿ ಸ್ಥಳೀಯ ಸಮಿತಿ ಸದಸ್ಯರಾದ ಅನ್ವರ್ ಖಾನ್, ಸಂಪತ್ ಗೌಂಡಿ, ಸಿದ್ದಪ್ಪ, ಶಾಂತು, ಸಾಬಣ್ಣ, ಜೈಬೀಮ, ಬಾಲಕೃಷ್ಣ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.