ಸಮಾಜವಾದಿ ಪಕ್ಷದ ವಿರುದ್ದ ಪ್ರಧಾನಿ ವಾಗ್ದಾಳಿ

ಗೋರಖ್ ಪುರ್, ಡಿ.7- ಭಯೋತ್ಪಾದಕರ ವಿರುದ್ಧ ದಯೆ ತೋರಿಸಲು ಮತ್ತು ಅವರನ್ನು ಜೈಲಿನಿಂದ ಹೊರತರಲು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು ‘ಕೆಂಪು ಟೋಪಿ’ಗಳು ಬಯಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವಿರುದ್ದ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭದ್ರಕೋಟೆ ಗೋರಖ್ ಪುರದಲ್ಲಿ ಏಮ್ಸ್ , ಪ್ರಮುಖ ರಸಗೊಬ್ಬರ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಕೆಂಪು ಟೋಪಿಗಳನ್ನು ಧರಿಸಿರುವವರು ಕೇವಲ ಕೆಂಪು ದೀಪದ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ಉತ್ತರ ಪ್ರದೇಶಕ್ಕೆ ಅವರು ರೆಡ್ ಅಲರ್ಟ್ (ಅಪಾಯ) ಆಗಿರುತ್ತಾರೆ ಎಂದು ಟೀಕಿಸಿದರು.
ಹಿಂದಿನ ಸರ್ಕಾರಗಳು ಜನರ ಅಭಿವೃದ್ಧಿಗೆ ಆಸಕ್ತಿ ತೋರಿಸಲಿಲ್ಲ. ಗೋರಖ್‌ಪುರದ ರಸಗೊಬ್ಬರ ಸ್ಥಾವರವು ಇಡೀ ಪ್ರದೇಶದ ರೈತರಿಗೆ ಇಲ್ಲಿ ಉದ್ಯೋಗಕ್ಕಾಗಿ ಎಷ್ಟು ಮಹತ್ವದ್ದಾಗಿದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಹಿಂದಿನ ಸರ್ಕಾರಗಳು ಇದನ್ನು ಪ್ರಾರಂಭಿಸಲು ಆಸಕ್ತಿ ತೋರಿಸಲಿಲ್ಲ ಎಂದು ಕಿಡಿಕಾರಿದರು.
ಡಬ್ಬಲ್ ಇಂಜಿನ್ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಸಾಂಕ್ರಾಮಿಕ ಸಮಯದಲ್ಲಿಯೂ ರಾಜ್ಯದ ಪ್ರಗತಿಯನ್ನು ಶಕ್ತಗೊಳಿಸಿತು. ಹಿಂದಿನ ಸರ್ಕಾರಗಳು ಅಪರಾಧಿಗಳಿಗೆ ರಕ್ಷಣೆ ನೀಡುವ ಮೂಲಕ ಉತ್ತರ ಪ್ರದೇಶ ಹೆಸರಿಗೆ ಮಸಿ ಬಳಿದಿತ್ತು. ಆದರೆ, ಇಂದು ಮಾಫಿಯಾ ಜೈಲಿನಲ್ಲಿದೆ. ಹೂಡಿಕೆದಾರರು ರಾಜ್ಯದಲ್ಲಿ ಮುಕ್ತವಾಗಿ ಬಹಿರಂಗವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅದು ಡಬಲ್ ಎಂಜಿನ್‌ನ ಡಬಲ್ ಪ್ರಗತಿಯಾಗಿದೆ. ಅದಕ್ಕಾಗಿಯೇ ಯುಪಿ ಡಬಲ್ ಎಂಜಿನ್ ಸರ್ಕಾರದ ಮೇಲೆ ನಂಬಿಕೆ ಹೊಂದಿದೆ ಎಂದು ಯೋಗಿ ಸರ್ಕಾರದ ಆಡಳಿತಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಅಖಿಲೇಶ್ ತಿರುಗೇಟು

ಪ್ರಧಾನಿ ಮೋದಿ ಅವರ ವಾಗ್ದಾಳಿಗೆ ಟ್ವಿಟರ್​ ಮೂಲಕ ತಿರುಗೇಟು ನೀಡಿರುವ ಉತ್ತರ ಪ್ರದೇಶ ಮಾಜಿ ಸಿಎಂ, ಅಖಿಲೇಶ್​ ಯಾದವ್​, ಬೆಲೆ ಏರಿಕೆ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ಕೆಟ್ಟ ಸ್ಥಿತಿಯ ಬಗ್ಗೆ ಬಿಜೆಪಿಗೆ ರೆಡ್ ಅಲರ್ಟ್ ಆಗಿದೆ ಎಂದು ತಿರುಗೇಟು ನೀಡಿದರು
ಹತ್ರಾಸ್, ಲಖಿಂಪುರ ಮತ್ತು ಮಹಿಳೆಯರು ಮತ್ತು ಯುವಕರ ಮೇಲೆ ಕಿರುಕುಳ. ಶಿಕ್ಷಣ ವ್ಯವಸ್ಥೆ ಕುಸಿತ, ವ್ಯಾಪಾರ ಮತ್ತು ಆರೋಗ್ಯ ವಿಚಾರಗಳು ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುವ ‘ರೆಡ್ ಕ್ಯಾಪ್’ಗಳು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.