ಸಮಾಜವಾದಿ ಕ್ರಾಂತಿಗಾಗಿ ಬಲಿಷ್ಠ ಜನಾಂದೋಲನ ಅಗತ್ಯ

ಶಹಾಬಾದ,ಆ.6-ಅಪ್ರತಿಮ ಮಾಕ್ರ್ಸ್‍ವಾದಿ ಚಿಂತಕರು, ತತ್ವಜ್ಞಾನಿಗಳು ಹಾಗೂ ಭಾರತ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥಕ್ಕೆ ಸೇರಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಕಾಮ್ರೇಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ವರ್ಷಾಚರಣೆ ಕಾರ್ಯಕ್ರಮವನ್ನು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಸ್ಥಳೀಯ ಸಮಿತಿಯಿಂದ ಶಹಾಬಾದ ನಗರದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಮ್ರೇಡ್ ಶಿವದಾಸ ಘೋಷ್ ರವರ ಭಾವಚಿತ್ರಕ್ಕೆ ಎಸ್.ಯು.ಸಿ.ಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಗಣಪತರಾವ ಮಾನೆ ಅವರು ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಣಪತರಾವ ಮಾನೆ ಅವರು 1947 ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರವಾದರೂ ಸಹ ಅದು ಜನಸಮಾನ್ಯರಿಗೆ ನೈಜ್ಯವಾದ ಸ್ವಾತಂತ್ರ್ಯ ತಂದು ಕೊಡಲಿಲ್ಲ್ಲ. ಶೋಷಣೆಯಿಂದ ಮುಕ್ತವಾಗಲಿಲ್ಲ. ಬದಲಿಗೆ ಶೋಷಕ ಬಂಡವಾಳಶಾಹಿ ವರ್ಗದ ಆಳ್ವಿಕೆಯು ಸ್ಥಾಪನೆಗೊಂಡು ಇಂದಿನ ಎಲ್ಲಾ ಸಮಸ್ಯೆಗಳಿಗೆ ಇದೇ ಮೂಲ ಕಾರಣವೆಂದು ಮನಗೊಂಡ ಕಾಮ್ರೇಡ್ ಶಿವದಾಸ್ ಘೋಷ್ ರವರು ಜನರ ವಿಮುಕ್ತಿಗಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗಾಗಿ ಬಲಿಷ್ಠ ಜನಾಂದೋಲನ ಸಂಘಟಿಸಲು 1948 ರಲ್ಲಿಯೇ ನೈಜ ಕಮ್ಯೂನಿಷ್ಟ್ ಪಕ್ಷವಾದ ಎಸ್.ಯು.ಸಿ.ಐ (ಸಿ) ಪಕ್ಷವನ್ನು ಸ್ಥಾಪಿಸಿದರು. ಕೆಲವೇ ಕೆಲವು ಸಂಗಾತಿಗಳೊಂದಿಗೆ ಪಕ್ಷ ಕಟ್ಟುವ ಸಾಹಸಕ್ಕೆ ಕೈ ಹಾಕಿದರು. ಹುಸಿ ಕಮ್ಯೂನಿಷ್ಟ್ ಇವರನ್ನು ಮೂದಲಿಸಿದರು, ಇತರರು ಲೇವಡಿ ಮಾಡಿದರು ತಮ್ಮ ದಾರಿಯಿಂದ ಒಂದಿಂಚೂ ಹಿಂದೆ ಸರಿಯಲಿಲ್ಲ. ನಾನು ಹಸಿವಿನಿಂದ ರಸ್ತೆಯಲ್ಲಿ ಬಿದ್ದು ಸತ್ತರೂ ಸರಿ, ಘನತೆಯಿಂದ ಸಾಯುತ್ತೇನೆ. ನಾನೂ ಸೋಲಬಹುದು, ಆದರೆ ನನ್ನ ಆತ್ಮಸಾಕ್ಷಿಯನ್ನು ಮಾರಿಕೋಳ್ಳಲಾರೆ ಎಂದು ಹೇಳಿದರು.
ಸ್ವಾತಂತ್ರ್ಯ ದೊರಕಿ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇಲ್ಲಿಯವರೆಗೆ ಆಡಳಿತ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಬೆಲೆಏರಿಕೆ, ಅನಕ್ಷರತೆ, ಭ್ರಷ್ಟಾಚಾರವನ್ನು ಪರಿಹಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ, ಎಂದು ಆರೋಪಿಸಿದರು. ಮಾಕ್ರ್ಸವಾದ ಹಾಗೂ ಲೆನಿನ್‍ವಾದ ವೈಚಾರಿಕತೆಯನ್ನು ಜೀವನದಲ್ಲಿ ಆಳವಡಿಸಿಕೊಳ್ಳುವುದರ ಮೂಲಕ ಈ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆದು ಶೋಷಣೆಮುಕ್ತ ಸಮಾಜವನ್ನು ಕಟ್ಟಲು ಹೋರಾಟಕ್ಕೆ ಮುಂದೆ ಬರಬೇಕೆಂದು ಕರೆ ನೀಡಿದರು.
ಎಸ್.ಯು.ಸಿ.ಐ (ಸಿ) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ರಾಮಣ್ನ ಎಸ್.ಇಬ್ರಾಹಿಂಪುರ ರವರು ಮಾತನಾಡುತ್ತ, ಈ ಯುಗದ ಓರ್ವ ಮಾಹಾನ್ ಮಾಕ್ರ್ಸವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಹೋರಾಟಭರಿತ ಜೀವನದಿಂದ ನಾವುಗಳು ಪ್ರೇರಿತರಾಗಿ, ದೇಶದಲ್ಲಿ ಇಂದು ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ. ಸೈದಾಂತಿಕವಾಗಿ ಹಾಗೂ ನೈತಿಕವಾಗಿ ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡು ಕ್ರಾಂತಿಯನ್ನು ಸಂಘಟಿಸಬೇಕಾಗಿದೆ. ಕೇಂದ್ರದಲ್ಲಿ ಎಂಟು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದಿಂದ್ದಾಗಿ ದೇಶದ ಬಡಜನರ ಬದುಕು ಬೆಲೆ ಏರಿಕೆಯ ಬಿಸಿಯಲ್ಲಿ ಕುದಿಯುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಹಾಗೂ ಇತರ ಅಗತ್ಯ ವಸ್ತುಗಳ ದರ ಗಗನಕ್ಕೇರಿ ಜನಸಾಮಾನ್ಯರ ಜೀವನ ಕಂಗೆಟ್ಟಿದೆ. ಬಡವರ ಬದುಕು ಅಸಹನೀಯವಾಗಿದೆ. ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು ತೀವ್ರವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಧರ್ಮಗಳ ಆಧಾರದ ಮೇಲೆ ಮನಸ್ಸುಗಳನ್ನು ಒಡೆಯುತ್ತಿದ್ದಾರೆ, ಪಠ್ಯಪುಸ್ತಕಗಳನ್ನು ತಿರುಚುವುದರ ಮೂಲಕ ಮಕ್ಕಳ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಒಂದು ಪ್ರಬಲವಾದ ಜನಾಂದೋಲನ ಅಗತ್ಯವಾಗಿದೆ ಹೇಳಿದರು.
ಈ ಸಭೆಯಲ್ಲಿ ಎಸ್.ಯು.ಸಿ.ಐ (ಸಿ) ನಾಯಕರಾದ ಗುಂಡಮ್ಮ ಮಡಿವಾಳ ಅವರು ಮಾತನಾಡಿದರು. ಕಾಮ್ರೇಡ್ ಜಗನ್ನಾಥ ಎಸ್.ಎಚ್. ಅವರು ನಿರೂಪಿಸಿದರು. ಪಕ್ಷದ ನಾಯಕರಾದ ರಾಘವೇಂದ್ರ ಎಮ್.ಜಿ. ರಾಜೇಂದ್ರ ಆತ್ನೂರ್, ಸಿದ್ದು ಚೌದರಿ.. ತುಳಜರಾಮ ಎನ್ ಕೆ, ರಮೇಶ ದೇವಕರ. ನೀಲಕಂಠ ಎಮ್ ಹುಲಿ. ತಿಮ್ಮಣ್ಣ ಮಾನೆ. ಶಿವುಕುಮಾರ ಕುಸಾಳೆ, ರಘು ಮಾನೆ. ಮಹಾದೇವಿ ಮಾನೆ, ಮಹಾದೇವಿ ಆತ್ನೂರ, ರೇಣುಕಾ. ರಾಧಿಕಾ ಚೌದರಿ. ಸುಕನ್ಯಾ. ರಘು ಪವಾರ. ಶ್ರೀನಿವಾಸ. ತೇಜಸ್ ಇಬ್ರಾಹಿಂಪೂರ, ಕಿರಣ ಮಾನೆ, ಕಸ್ತೂರಿ ಕುಸಾಳೆ, ಅಜಯ ಗುರಜಾಲಕರ್. ಬಾಬು. ಸುರೇಶ ಸೇರಿ ಹಲವಾರು ಜನ ಭಾಗವಹಿಸಿದ್ದರು.