ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಹಿತ್ಯವನ್ನು ಓದಬೇಕು:ರಹಮತ್ ತರೀಕೆರೆ


ಬಳ್ಳಾರಿ,ಮಾ 5  ಬಡವರು, ಅಸಹಾಯಕರು , ಹಸಿವು , ಯಾತನೆಗೆ ಒಳಗಾದವರ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಹಿತ್ಯವನ್ನು ಓದಬೇಕು.  ಇವೆಲ್ಲವುಗಳನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಲು ಸಾಹಿತ್ಯ ಹೊಸ ಕಣ್ಣೋಟವನ್ನು  ರೂಪಿಸಬಲ್ಲದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಅವರು ನಗರದ ಸರಳಾದೇವಿ ಕಾಲೇಜಿನಲ್ಲಿ ಸೋಮವಾರ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ವಿಭಾಗದ ವತಿಯಿಂದ ನಿನ್ನೆ  ಯೋಜಿಸಿದ್ದ ‘ ಸಾಹಿತ್ಯ ಏಕೆ ಓದಬೇಕು ‘ ಎನ್ನುವ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರ್ತಮಾನದ ಸನ್ನಿವೇಶದಲ್ಲಿ ಸಂಬಂಧಗಳು ವಿಘಟನೆಯಾಗುತ್ತಿವೆ. ಒಟ್ಟಿಗೆ ಬದುಕುವುದನ್ನು , ಹಂಚಿಕೊಂಡು ತಿನ್ನುವುದನ್ನು ಸಾಹಿತ್ಯ ಕಲಿಸಿಕೊಡುತ್ತದೆ. ಸಿನಿಮಾ ,ನಾಟಕ ,ಸಂಗೀತ , ಶಿಲ್ಪಕಲೆ ಇವೆಲ್ಲವೂ ಬದುಕಿಗೆ ಲಾಭವನ್ನು ತಂದುಕೊಡದಿದ್ದರೂ ಮನುಷ್ಯನಿಗೆ ಬೇಕಾದ ನೆಮ್ಮದಿ, ಆಲೋಚನಾಕ್ರಮ, ವ್ಯಕ್ತಿತ್ವವನ್ನು ನಿರ್ಮಾಣ ಬಲ್ಲವು ಎಂದು ಮಾರ್ಮಿಕವಾಗಿ ನುಡಿದರು.
ನಾವು ಮಾತ್ರ ಬದುಕಬೇಕು ಎಂದು ಮಾರುಕಟ್ಟೆ ಸಂಸ್ಕೃತಿ ಹೇಳುತ್ತದೆ. ಎಲ್ಲರೂ ಕೂಡಿ ಬದುಕಿ ನಮ್ಮ ಊರು, ಬಂಧುಗಳು ,ಪರಿಸರವನ್ನು ಪ್ರೀತಿಸುವಂತಾಗಬೇಕು. ದ್ವೇಷಿಸುವಂತಾಗಬಾರದು. ಪುಸ್ತಕ ಸಂಸ್ಕೃತಿ ಹೋದರೂ ನಡೆಯುತ್ತೆ. ಓದುವ ಸಂಸ್ಕೃತಿ ಹೋಗಬಾರದು. ಜಾಗತೀಕರಣದ ಈ ಹೊತ್ತಿನಲ್ಲಿ ಓದುವ ವಿಧಾನ ಬೇರೆಯಾಗಿದೆ .ಕೇಳುವ, ನೋಡುವ ಕ್ರಿಯೆಯ ಮೂಲಕ ಸಾಹಿತ್ಯಕ್ಕೆ ಮುಖಾಮುಖಿಯಾಗುತ್ತಿದ್ದೇವೆ ಎಂದರು.
ನಮ್ಮ ನಡುವೆ ಅಮೃತದ ನದಿ ಮತ್ತು ವಿಷದ ನದಿಗಳು ಹರಿಯುತ್ತಿವೆ. ಯಾವ ನದಿಯ ನೀರನ್ನು ಕುಡಿಯಬೇಕು ಎನ್ನುವ ಆಯ್ಕೆಯ ಪ್ರಜ್ಞೆ ನಮ್ಮದಾಗಿಸಿಕೊಳ್ಳಬೇಕು.  ವಿಶ್ವ ಮಾನವ ಪರಿಕಲ್ಪನೆಗೆ ನಾವೆಲ್ಲರೂ ತೆರೆದುಕೊಳ್ಳಬೇಕಾದ ಅಗತ್ಯವಿದೆ. ಗ್ರಾಮ ಜಗತ್ತಿನ ಅನಕ್ಷರಸ್ಥ ಜನ ಸಮುದಾಯ ಯಾವುದೇ ಸಾಹಿತ್ಯವನ್ನು ಓದದೆ ಇದ್ದರೂ ಘನತೆಯಿಂದ ಬದುಕಿ ಬಾಳುತ್ತಿರುವುದು ನಮ್ಮ  ಕಣ್ಣೆದುರಿಗೆ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ವಿಭಾಗದ ಮುಖ್ಯಸ್ಥರಾದ ದಸ್ತಗೀರಸಾಬ್ ದಿನ್ನಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಾಹಿತ್ಯದ ಬಗೆಗೆ ಅಭಿರುಚಿ, ಆಸಕ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ. ಮಂಜುನಾಥ ರೆಡ್ಡಿ ಸಾಹಿತ್ಯ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುತ್ತಲೇ ಅವನಿಗೆ ಮಾನವೀಯ ಸಂವೇದನೆಯನ್ನು , ಬದುಕಿಗೆ ಬೇಕಾದ ಜೀವಸತ್ವವನ್ನು ಕೊಡುತ್ತದೆ ಎಂದರು. ವೇದಿಕೆ ಮೇಲೆ ಆಂತರಿಕ ಭರವಸೆ ಕೋಶದ ಸಂಚಾಲಕರಾದ ಬಿ. ಜಯಶ್ರೀ ಇದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಾಮಸ್ವಾಮಿ, ಪ್ರವೀಣಕುಮಾರ್, ಲಿಂಗಪ್ಪ, ಡಾ.ಹುಚ್ಚುಸಾಬ್,ಡಾ.ಬಸಪ್ಪ , ವಿರೂಪಾಕ್ಷಿ , ರಾಜಶೇಖರ, ಲೋಹಿಯಾ ಪ್ರತಿಷ್ಠಾನದ ಸಿ.ಚನ್ನಬಸವಣ್ಣ , ಲೇಖಕರಾದ ವೀರೇಂದ್ರ ರಾವಿಹಾಳ್, ಡಾ. ಮಂಜುನಾಥ,  ಐರಾಜ್ ಮುಂತಾದವರು ಉಪಸ್ಥಿತರಿದ್ದರು.