ಸಮಾಜಮುಖಿ ಸೇವಾ ಸಂಸ್ಥೆಗಳು ಹೆಚ್ಚಾಗಲಿ

ಕಲಬುರಗಿ:ಎ.30: ಬಸವಾದಿ ಶರಣರ ತತ್ವದಡಿಯಲ್ಲಿ ಸ್ಥಾಪನೆಯಾಗಿ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಹತ್ತು-ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಬಸವೇಶ್ವರ ಸಮಾಜ ಸೇವಾ ಬಳಗವು ಸಮಾಜಕ್ಕೆ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡುತ್ತಿದೆ. ಸರ್ಕಾರ, ಒಂದು ವಿಶ್ವವಿದ್ಯಾಲಯ, ಮಠ-ಮಾನ್ಯ ಮಾಡದ ಕೆಲಸ ಬಳಗವು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಮಾಜಮುಖಿ ಸೇವಾ ಸಂಸ್ಥೆಗಳು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಾಗಬೇಕಾಗಿದೆ ಎಂದು ಪೂಜ್ಯ ಶಿವಾನಂದ ಶ್ರೀಗಳು ಆಶಯ ವ್ಯಕ್ತಪಡಿಸಿದರು.

 ನಗರದ ಮಕ್ತಂಪುರ ಗುರುಬಸವ ಮಠದಲ್ಲಿ ಶನಿವಾರ ಸಂಜೆ ಏರ್ಪಡಿಲಾಗಿದ್ದ 'ಬಸವೇಶ್ವರ ಸಮಾಜ ಸೇವಾ ಬಳಗ'ದ ಸಂಸ್ಥಾಪನೆಯ ಆರನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
  ಬಸವೇಶ್ವರ ಸಮಾಜ ಸೇವಾ ಬಳಗವು ನಿರಂತರವಾಗಿ ಸಮಾಜಮುಖಿ ಸೇವೆಗಳಲ್ಲಿ ತೊಡಗಿರುತ್ತದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ತತ್ವವನ್ನು ಆಚರಣೆಗೆ ತರುತ್ತಿದೆ. ಒಂದು ಕಾರ್ಯಕ್ರಮ ಆಯೋಜನೆ ಮಾಡುವುದು ಕಷ್ಟದ ಕೆಲಸವಾಗಿರುವ ಸಂದರ್ಭದಲ್ಲಿ ಬಳಗವು ಆರು ವರ್ಷಗಳಲ್ಲಿ ಸಮಾಜಮುಖಿಯಾದ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಪರಿವರ್ತನೆಗಾಗಿ ಶ್ರಮಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯವಾಗಿದೆ. ಈ ಸೇವಾ ಬಳಗದಲ್ಲಿರುವವರು ಧನ್ಯರು ಎಂದು ಹೇಳಿದರು.
   ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಮಾತನಾಡಿ, ಸಮಾಜ, ದೇಶ ನನಗೇನು ಕೊಟ್ಟಿದೆ ಎಂದು ಪ್ರಶ್ನಿಸುವ ಹೆಚ್ಚಿನ ಜನರ ಈಗಿನ ಕಾಲದಲ್ಲಿ, ಸದಾ ಸಮಾಜದ ಒಳಿತಿಗಾಗಿ ದುಡಿಯುವ ಹೃದಯವಂತರ ಬಳಗ ಇದಾಗಿದೆ ಎಂಬುದಕ್ಕೆ ಅದರ ಜನಪರ ಕಾರ್ಯಗಳೇ ಸಾಕ್ಷಿಯಾಗಿವೆ. ಸಮಾಜಕ್ಕೆ ಏನು ಅವಶ್ಯಕತೆ ಇದೆ ಎಂಬುದನ್ನು ಬಳಗವು ಮನಗಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಅದರ ವಿಶೇಷತೆಯಾಗಿದೆ. ಇದರ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬೇಕಾದದ್ದು ಅಗತ್ಯವಾಗಿದೆ ಎಂದರು.

ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಡಾ.ಸುನೀಲಕುಮಾರ ಎಚ್.ವಂಟಿ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿದರು. ಸಂಚಾಲಕ ವೀರೇಶ ಬೋಳಶೆಟ್ಟಿ ನರೋಣಾ, ಸದಸ್ಯರಾದ ಶಿವಯೋಗಪ್ಪ ಬಿರಾದಾರ, ಬಸವರಾಜ ಎಸ್.ಪುರಾಣೆ, ರಾಜಕುಮಾರ ಬಟಗೇರಿ, ಮಲ್ಲಿನಾಥ ಮುನ್ನಳ್ಳಿ, ಸಂತೋಷ ರಾಯ್ಕೋಡ್, ಅನೀಲಕುಮಾರ ಡಬರಾಬಾದ್, ಡಾ.ನಾನಾಸಾಹೇಬ್ ಪಾಟೀಲ್, ಮಲ್ಲಿಕಾರ್ಜುನ ಕಾಕಂಡಕಿ, ರಾಜೇಂದ್ರ ನಿಂಗದಳ್ಳಿ, ಮಲ್ಲಿಕಾರ್ಜುನ, ಪದ್ಮಣ್ಣ, ಶಂಕರ, ಬಸಯ್ಯ, ಅನೀಲಕುಮಾರ, ಚಂದ್ರಶೇಖರ ಸೇರಿದಂತೆ ಮತ್ತಿತರರಿದ್ದರು.