ಸಮಾಜಮುಖಿ ಸಾಹಿತ್ಯಕ್ಕೆ ಉಜ್ವಲ ಭವಿಷ್ಯ

ಕಲಬುರಗಿ:ಮಾ.21: ‘ಖಡ್ಗಗಿಂತ ಲೇಖನಿ ಹರಿತ’ ಎಂಬ ಮಾತು ಬರವಣಿಗೆಯ ಮಹತ್ವವನ್ನು ಸಾರುತ್ತದೆ. ಕೇವಲ ಕಲ್ಪನೆ ಆಧಾರಿತ, ವಾಸ್ವವಿಕತೆಗೆ ದೂರವಿರುವ, ಪ್ರಸ್ತುತವೆನಿಸದ ಸಾಹಿತ್ಯದಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನೆಯಾಗಲಾರದು. ಬದಲಿಗೆ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಅವುಗಳಿಗೆ ಪರಿಹಾರವನ್ನು ಸೂಚಿಸುವ, ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಸಾಹಿತ್ಯ ರಚನೆಯಾದರೆ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ ಮತ್ತು ಅದು ದೀರ್ಘಕಾಲಿಕವಾಗಿರುತ್ತದೆಯೆಂದು ಹಿರಿಯ ಕವಿ ಎಂ.ಬಿ.ನಿಂಗಪ್ಪ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ವಿಶ್ವ ಕವನ ದಿನಾಚರಣೆ’ಯನ್ನು ಸ್ವರಚಿತ ಕವಿತೆಯನ್ನು ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಮಾತನಾಡಿ, ಕವಿಯಲ್ಲಿ ಅದ್ಭುತವಾದ ಕಲ್ಪನಾ ಶಕ್ತಿ ಇರಬೇಕು. ಅದು ಸಮಾಜಮುಖಿಯಾಗಿರಬೇಕು. ಉತ್ತಮ ಕವಿತೆಗಳು ಸಮಾಜದ ಪ್ರತಿಬಿಂಬವಾಗಿವೆ. ಇವುಗಳು ವ್ಯಕ್ತಿಯಲ್ಲಿರುವ ಭಾವನೆ, ಸಾಹಿತ್ಯ, ರಸಸ್ವಾದ, ಕಲ್ಪನಾಶಕ್ತಿ, ಆಶಯಭಾವ, ಹಾಡುಗಾರಿಕೆಯಂತಹ ಗುಣಗಳನ್ನು ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ರಚಿಸುವ ಬಗೆಯನ್ನು ಹೇಳಿಕೊಡಬೇಕು. ಶ್ರೇಷ್ಠ ಕವನಗಳು ವ್ಯಕ್ತಿಗೆ ಆನಂದ, ತೃಪ್ತಿ, ಸೃಜನಶೀಲತೆ, ಉತ್ತಮ ಗಾಯಕರನ್ನಾಗಿಸುತ್ತದೆ. ಆದ್ದರಿಂದ ಕವನಗಳ ರಚನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಾಗರ ಜಿ.ಬಂಗರಗಿ, ಅಮರ ಜಿ.ಬಂಗರಗಿ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ರಾಜಕುಮಾರ ಬಟಗೇರಿ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.