ಸಮಾಜಮುಖಿ ಬದುಕಿನಿಂದ ಪರಿಪೂರ್ಣತೆ

ಗುಳೇದಗುಡ್ಡ ಆ.6- ಸೇವಾ ನಿವೃತ್ತಿ ಬಳಿಕ ಪ್ರತಿಯೊಬ್ಬರೂ ಸಮಾಜದ ಏಳ್ಗೆಗಾಗಿ ದುಡಿಯಲಿ, ವ್ಯಕ್ತಿಗತ ಬದುಕುವುದಕ್ಕಿಂತ ಸಮಾಜಮುಖಿಯಾದ ಬದುಕು ಪರಿಪೂರ್ಣತೆಯತ್ತ ಕೊಂಡ್ಯೊಯ್ಯುತ್ತದೆ ಎಂದು ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಅವರು ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ಗುಳೇದಗುಡ್ಡ ಮತ್ತು ಭಂಡಾರಿ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯಾವಲೋಕನ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಹುದ್ದೆಯಿಂದ ವಯೋನಿವೃತ್ತಿ ಬಳಿಕ ಸಮಾಜದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಯುವಕರಿಗೆ ಮಾರ್ಗದರ್ಶನ ಮಾಡಿರಿ. ಸಾಹಿತ್ಯ ಚಟುವಟಿಕೆಗಳು ಸಮಾಜ ತಿದ್ದುವ ಕಾರ್ಯಕ್ಕೆ ಪೂರಕವಾಗಲಿ. ವ್ಯಕ್ತಿ ನಿರಂತರವಾಗಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆಗಳಾಗುತ್ತವೆ. ವಿಶ್ರಾಂತಿ ಬದುಕು ನೆಮ್ಮದಿ ತರಲಿ ಎಂದರು.
ಪಿ.ಎಸ್.ಐ ಲಕ್ಷ್ಮಣ ಆರಿ ಅತಿಥಿಗಳಾಗಿ ಮಾತನಾಡಿ, ಸೇವಾಗುಣ ಇರಬೇಕು. ಅದು ಯುವಕರಿಗೆ ಮಾದರಿಯಾಗುತ್ತದೆ. ಇಂದು ಯುವಕರಲ್ಲಿ ಕನ್ನಡಾಭಿಮಾನ, ದೇಶಾಭಿಮಾನ, ಸಮಾಜ ಮುನ್ನಡೆಸೋ ಗುಣ ಕಡಿಮೆಯಾಗುತ್ತಿದೆ. ಸೇವಾ ನಿವೃತ್ತಿ ಹೊಂದುವವರು ಮನೆಯಲ್ಲಿ ಕೂಡದೇ ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಪಿಯು ಕಾಲೇಜಿನ ಚೇರಮನ್ ಸಂಗಣ್ಣ ಪಟ್ಟಣಶೆಟ್ಟಿ, ಮಾಜಿ ಶಾಸಕ ಎಂ.ವಿ.ಬನ್ನಿ ಮಾತನಾಡಿದರು. ಸೇವೆಯಿಂದ ನಿವೃತ್ತಿ ಹೊಂದಿದ ಡಾ.ಸಿ.ಎಂ.ಜೋಶಿಯವರ ಜೀವನ ಮತ್ತು ಸಾಹಿತ್ಯ ಕುರಿತು ಧಾರವಾಡ ಕ.ವಿ.ವಿ.ಯ ಅತಿಥಿ ಉಪನ್ಯಾಸಕ ಡಾ. ಸಂಗಮೇಶ ಕಲ್ಯಾಣಿ, ಡಾ.ಭೀಮನಗೌಡ ಪಾಟೀಲ, ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಸೇವಾ ನಿವೃತ್ತಿ ಹೊಂದಿದ ಡಾ.ಭೀಮನಗೌಡ ಪಾಟೀಲ, ಡಾ.ಸಿ.ಎಂ.ಜೋಶಿ, ಶಂಕರ ಹೂಲಿ ಮಾತನಾಡಿದರು. ಕೋಟೆಕಲ್ ಅಮರೇಶ್ವರ ಮಠದ ಡಾ. ನೀಲಕಂಠ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ವೃತ್ತಿಯಲ್ಲಿ ಸಲ್ಲಿಸಿದ ಸೇವೆ ಮುಗಿಸಿದ ತಾವು ಸಮಾಜಮುಖಿಯಾಗಿ ಬೆಳೆಯಿರಿ. ಯುವಕರಿಗೆ ಮಾರ್ಗದರ್ಶನ ಮಾಡಿರಿ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎನ್.ವೈ.ಬಡನ್ನವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಭಾಗ್ಯಾ ವಾಲೀಕಾರ, ಕಾವೇರಿ ಹಲಗಣಿ ವಂದಿಸಿದರು.