ಸಮಾಜಮುಖಿ ಜೀವನದಿಂದ ಸಮಗ್ರ ವ್ಯಕ್ತಿತ್ವ ನಿರ್ಮಾಣ: ಬೇವಿನಮರದ


ಶಿಗ್ಗಾವಿ,ಡಿ..2: ಸರಳತೆ ಸಜ್ಜನಿಕೆಯನ್ನೊಳಗೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಆದರ್ಶ ಬದುಕು ನಮ್ಮದಾಗಬೇಕಾದರೆ ನಾವು ಬದುಕುವುದರೊಂದಿಗೆ ಬೇರೆಯವರಿಗೆ ಬದುಕುವುದಕ್ಕಾಗಿ ಅವಕಾಶ ಮಾಡುವುದೇ ಜೀವನದ ಸಾರ್ಥಕತೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಇಂದು ಪಟ್ಟಣದ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಚನ್ನಪ್ಪ ಕುನ್ನೂರ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕುನ್ನೂರ ಅವರ 67 ವರ್ಷದ ತುಂಬು ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ ಮಂಜುನಾಥ ಕುನ್ನೂರ ಅವರು ತಮ್ಮ ಸಂಸ್ಥೆಯಲ್ಲಿ ಅನೇಕ ಬಡವರನ್ನು ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಬದುಕನ್ನು ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿತ್ವ ಹೊಂದಿದ್ದಾರೆ. ಶಿಕ್ಷಕರ ಮಗನಾಗಿ ಕಷ್ಟ-ಕಾರ್ಪಣ್ಯಗಳ ಮದ್ಯದಲ್ಲಿ ಸುಂದರ ಬದುಕನ್ನು ರೂಪಿಸಿಕೊಂಡು ಶಾಸಕರಾಗಿ ಸಂಸದರಾಗಿ ಅನೇಕ ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿ ಬೆಳೆದಿದ್ದಾರೆ ಎಂದು ಹೇಳಿದ ಅವರು ಮಂಜುನಾಥ ಕುನ್ನೂರ ಅವರ ಜೀವನ ಇತಿಹಾಸವನ್ನು ಎಳೆಎಳೆಯಾಗಿ ವಿವರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಂಸದ ಮಂಜುನಾಥ ಕುನ್ನೂರವರು ಎಲ್ಲರ ಪ್ರೀತಿ ವಿಶ್ವಾಸದಿಂದ ನನ್ನ ಬದುಕು ಸಾರ್ಥಕತೆಯನ್ನು ಕಂಡುಕೊಂಡಿದೆ. ಆರೋಗ್ಯ ಪೂರ್ಣವಾದ ಜೀವನ ನನ್ನದಾಗಿದೆ ಎಂದು ಕೃತಜ್ಞಾಪೂರ್ವಕವಾಗಿ ಮಾತನಾಡಿದರು.
ಹೊನ್ನಾಪುರ ಮಠದ ಕರಿಸಿದ್ದೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭರಮಜ್ಜ ನವಲಗುಂದ, ವೀರಣ್ಣ ಬಡ್ಡಿ, ಪ್ರಕಾಶ ಹಾದಿಮನಿ, ಅಶೋಕ ಕಾಳೆ, ಶ್ರೀಮತಿ ಜಿ. ಎಂ. ಅರಗೋಳ, ಎಂ. ಬಿ. ನೀರಲಗಿ, ಸಿ. ಟಿ. ಪಾಟೀಲ ಮುಂತಾದವರು ಇದ್ದರು.