ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ಕೊಡಿ  

 ಹಿರಿಯೂರು : ನ.25-ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾಧ್ಯಮಗಳು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತಿವೆ ಮಾಧ್ಯಮಗಳು ಶಾಂತಿ ಸೌಹಾರ್ದ ಮನೋಭಾವನೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ಹಿರಿಯೂರಿನ ಎ.ಕೃಷ್ಣಪ್ಪ ಸಭಾಂಗಣದಲ್ಲಿ ಖ್ಯಾತ ಪತ್ರಕರ್ತ ಹರಿಪ್ರಕಾಶ್ ಕೋಣೆ ಮನೆ ನೇತೃತ್ವದ ನೂತನ ವಿಸ್ತಾರ ಸುದ್ದಿವಾಹಿನಿಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ದಿನಗಳಲ್ಲಿ ಚಲನಚಿತ್ರ ನೋಡಲು ಮತ್ತು ಚಿತ್ರಮಂಜರಿ ನೋಡಲು ಎಲ್ಲರೂ ಸಮಯಕ್ಕೆ ಸರಿಯಾಗಿ ಟಿವಿ ಮುಂದೆ ಕೂರುತ್ತಿದ್ದೆವು ಈಗ ಸಾಕಷ್ಟು ವಾಹಿನಿಗಳು ಆರಂಭವಾಗಿವೆ ರಾಜ್ಯಮಟ್ಟದ ರಾಷ್ಟ್ರೀಯ ಮಟ್ಟದ ಮತ್ತು ದೇಶ ವಿದೇಶಗಳ ಸುದ್ದಿಗಳನ್ನು ವೇಗವಾಗಿ ನಾವು ನೋಡುತ್ತಿದ್ದೇವೆ ಎಂದು ಹೇಳಿದರು. ನೂತನವಾಗಿ ಆರಂಭವಾಗಿರುವ ವಿಸ್ತಾರ ಸುದ್ದಿವಾಹಿನಿಗೆ ಹಾಗೂ ಹಿರಿಯೂರಿನ ಉತ್ಸಾಹಿ ಯುವ ಪ್ರತಿನಿಧಿ ಚಿದಾನಂದ್ ರವರಿಗೆ ಶುಭ ಹಾರೈಸಿದರು. ರೈತ ಮುಖಂಡರಾದ ಆರನಕಟ್ಟೆ ಶಿವಕುಮಾರ್ ಮಾತನಾಡಿ ಮಾಧ್ಯಮಗಳು ಯಾವಾಗಲೂ ಹೋರಾಟಗಾರರಿಗೆ ಬೆಂಬಲ ನೀಡುತ್ತಿವೆ ಎಂದು ಹೇಳಿದರು ವಸ್ತು ನಿಷ್ಠತೆಗೆ ವಿಚಾರ ನಿಷ್ಠತೆಗೆ ಹೆಚ್ಚಿನ ಆದ್ಯತೆ ಕೊಡಬೇಕು ರೈತರು ದಲಿತರು ಹಿಂದುಳಿದವರು ನಿರ್ಗತಿಕರ ಸಮಸ್ಯೆಗಳ ಬಗ್ಗೆ ಪ್ರತಿಬಿಂಬಿಸಬೇಕು ಸಮಾಜದ ಕುಂದು ಕೊರತೆಗಳ ಬಗ್ಗೆ ವರದಿ ಮಾಡಬೇಕು ಎಂದು ಹೇಳಿದರು.ನಿವೃತ್ತ ಮುಖ್ಯ ಅಭಿಯಂತರರಾದ ರವೀಂದ್ರಪ್ಪ ಮಾತನಾಡಿ ನೂತನ ಸುದ್ದಿವಾಹಿನಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿ ರಾಜ್ಯ ಮತ್ತು ರಾಷ್ಟ್ರದ ಉದ್ದಗಲಕ್ಕೂ ವಿಸ್ತಾರವಾಗಿ ಬೆಳೆಯಲಿ ಎಂದು ಹೇಳಿದರು. ಕೃಷಿಕ ಸಮಾಜದ ಅಧ್ಯಕ್ಷರಾದ ಹೆಚ್ ಆರ್ ತಿಮ್ಮಯ್ಯ ಮಾತನಾಡಿ  ವಿಸ್ತಾರ ಸುದ್ದಿ ವಾಹಿನಿಯು  ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕೆಲಸ ಮಾಡಲಿ ಎಂದರು. ನಗರಸಭೆ ಅಧ್ಯಕ್ಷರಾದ ಶಿವರಂಜನಿ ಯಾದವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷರಾದ ಡಾ. ವಿ ಎಂ ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಸ್ತಾರ ಸುದ್ದಿ ವಾಹಿನಿಯ ಹಿರಿಯೂರು ತಾಲೂಕು ಪ್ರತಿನಿಧಿ ಮಸ್ಕಲ್ ಚಿದಾನಂದ್ ಮತ್ತಿತರರು ಭಾಗವಹಿಸಿದ್ದರು. ಕಿರಣ್ ಮಿರಜ್ಕರ್ ಪ್ರಾರ್ಥಿಸಿದರು, ಬಬ್ಬೂರು ಪ್ರಕಾಶ್ ಸ್ವಾಗತಿಸಿದರು, ಕೇಶವಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.