ಸಮಾಜಪರ ಕಾಳಜಿಯುಳ್ಳ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಲಿ

ಕಲಬುರಗಿ.ಸೆ.24:ಯಾವುದೇ ಒಬ್ಬ ವ್ಯಕ್ತಿ ಕೇವಲ ತನಗಾಗಿ ಸ್ವಾರ್ಥ ಬದುಕು ಸಾಗಿಸಿದರೆ ಅಂತಹ ವ್ಯಕ್ತಿಯಿಂದ ಸಮಾಜಕ್ಕೆ ಪ್ರಯೋಜನೆಯಿಲ್ಲ. ಸಮಾಜದಲ್ಲಿರುವ ದೀನರು, ಶೋಷಿತರು, ಅನಾಥರು ಸೇರಿದಂತೆ ಮುಂತಾದವರಿಗೆ ಸಹಾಯ ಮಾಡುವುದು, ಸಮಾಜ, ರಾಷ್ಟ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವ ವ್ಯಕ್ತಿಗಳು ಸದಾ ಆದರ್ಶವಾಗುತ್ತಾರೆ. ಅಂತಹ ವ್ಯಕ್ತಿಗಳ ಸಂಖ್ಯೆ ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಬೇಕಾಗಿದೆ ಎಂದು ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳು ಆಶಯ ವ್ಯಕ್ತಪಡಿಸಿದರು.
ನಗರದ ಶಹಾಬಜಾರನಲ್ಲಿರುವ ಸುಲಫಲ ಮಠದಲ್ಲಿ ಶುಕ್ರವಾರ ಸಂಜೆ ತಮ್ಮ 55ನೇ ಜನ್ಮದಿನಾಚರಣೆ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸರಳವಾಗಿ ಜರುಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಿ ನಂತರ ಆಶೀರ್ವಚನ ನೀಡುತ್ತಿದ್ದರು.
ಮೇರು ವ್ಯಕ್ತಿತ್ವ ಹೊಂದಬೇಕಾದರೆ ಅಹಂಕಾರ, ಕೋಪ, ಅಸೂಯೆದಂತಹ ಗುಣಗಳನ್ನು ತ್ಯಜಿಸಬೇಕು. ಜಾತಿ, ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಗೆ ಪ್ರಾಧಾನ್ಯತೆಯನ್ನು ನೀಡಬೇಕು. ಎಂಥಹ ಸಂದರ್ಭಗಳಲ್ಲಿಯೂ ಪ್ರಜ್ಞಾಪೂರ್ವಕವಾಗಿಯೇ ವರ್ತಿಸಬೇಕು. ಸುಖ ಹಾಗೂ ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಪರಸ್ಪರ ಪ್ರೀತಿ, ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸಿದರೆ ಕಲ್ಯಾಣ ರಾಷ್ಟ್ರ ನಿರ್ಮಾಣವಾಗುತ್ತದೆ. ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡು ಬಳಗವು ನಿರಂತರವಾಗಿ ಸಮಾಜಪರ ಕೆಲಸಗಳನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಮುಖರಾದ ಸಿದ್ದಲಿಂಗ ಶಿವಾಚಾರ್ಯರು, ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ನರಸಪ್ಪ ಬಿರಾದಾರ ದೇಗಾಂವ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ,ವೀರೇಶ ಬೋಳಶೆಟ್ಟಿ ನರೋಣಾ, ಶ್ರೀಶೈಲ್ ತುಪ್ಪದ, ಬಸವರಾಜ ಹೆಳವರ ಯಾಳಗಿ, ಬಸವರಾಜ ಎಸ್.ಪುರಾಣೆ, ಸಿದ್ದರಾಮ ತಳವಾರ, ವಿಜಯಕುಮಾರ ಮಾಸ್ಟರ್, ಸೋಮೇಶ ಡಿಗ್ಗಿ, ಹಣಮಂತ ದಂಡಿ ಸೇರಿದಂತೆ ಮತ್ತಿತರರಿದ್ದರು.