ಸಮಾಜದ ಸಾಮರಸ್ಯಕ್ಕೆ ಅಪಾರ ಕೊಡುಗೆ

ವಿಜಯಪುರ:ಎ.24: ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿ ಸಮಾಜದ ಸಾಮರಸ್ಯಕ್ಕೆ ಅಪಾರ ಕೊಡುಗೆ ನೀಡಿದ ಅಣ್ಣ ಬಸವಣ್ಣ ಈ ಜಗಕ್ಕೆಲ್ಲ ಜ್ಞಾನದ ಬೆಳಕು ನೀಡಿದ್ದಾರೆ ಎಂದು ಶಿಕ್ಷಕ ಡಿ.ಕೆ. ರಾಠೋಡ ಹೇಳಿದರು.

ನಗರದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾಡಿದ ಅವರು ಬಸವಣ್ಣನವರು 12ನೇ ಶತಮಾನದ ಶರಣರಲ್ಲಿಯೆ ಧೃವತಾರೆ ಇದ್ದಂತೆ ಅನುಭವ ಮಂಟಪ ಸ್ಥಾಪಿಸುವ ಮೂಲಕ ಸಮಾಜದ ಎಲ್ಲ ವರ್ಗದ ಜನರಿಗೆ ಮುಕ್ತವಾಗಿ ಚರ್ಚಿಸಲು ಮತ್ತು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ವೇದಿಕೆಯನ್ನು ರೂಪಿಸಿ ಪ್ರಜಾಪ್ರಭುತ್ವ ತತ್ವವನ್ನು ಸಾರಿದರು.

ಯುವ ವೇದಿಕೆಯ ಅಧ್ಯಕ್ಷರಾದ ಅಮರೇಶ ಸಾಲಕ್ಕಿ ಮಾತನಾಡಿ, ನಾವು ಇಂದು ಬಸವಣ್ಣನವರ ವಿಚಾರಗಳನ್ನು ಮೈಗೂಡಿಸಿಕೊಂಡು ನಡೆಯಬೇಕಾಗಿದೆ. ಭಾಷಣವನ್ನು ಬಿಟ್ಟು ತತ್ವಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು. ಅಂದಾಗ ಶರಣರ ಕನಸು ಸಹಕಾರವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯರಾದ ಎಸ್.ವಾಯ್. ಗದಗ, ಶ್ರೀಮತಿ ಶಾರದಾ ಕೊಪ್ಪದ, ವಿ.ಸಿ. ನಾಗಠಾಣ, ಸೋಮಶೇಖರ ವಾಲಿ, ಸಂಗಮೇಶ ಬದಾಮಿ, ರವೀಂದ್ರ ಮೆಡೆಗಾರ, ಅಂಗಡಿ, ಮಹಾಂತೇಶ ಝಂಡೆ ಮತ್ತು ಯುವ ವೇದಿಕೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.