ಸಮಾಜದ ಸಬಲೀಕರಣಕ್ಕೆ ಸೇವಾಮನೋಭಾವನೆಗಳೇ ಭದ್ರವಾದ ಬುನಾದಿ

ದಾವಣಗೆರೆ.ಡಿ.೩೧; ಸಾಮಾಜಿಕ ಕಾಳಜಿ, ಸೇವಾ, ವಿಶಾಲ ಮನೋಭಾವನೆಯ ದೂರದೃಷ್ಟಿ ಸಮಾಜದ ಸಬಲೀಕರಣಕ್ಕೆಭದ್ರವಾದ ಬುನಾದಿ ಆಗುತ್ತದೆ. ಸಮಾಜದ ಸಂಘಟನೆಗಳಲ್ಲಿ ಸಮರ್ಪಣಾ ಭಾವನೆಯಿಂದ ನಿಸ್ವಾರ್ಥತೆಯಿಂದ ನಾವು ತೊಡಗಿಸಿಕೊಂಡಾಗ ಸಮಾಜದ ಏಳ್ಗೆಯ ದಾರಿ ಸುಗಮವಾಗುತ್ತದೆ ಎಂದು ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಇತ್ತೀಚಿಗೆ ನಡೆದ ಗೌಡ ಸಾರಸ್ವತ ಸಮಾಜದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆ.ಯೋಗೀಶ್ ಪೈಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಸಮಾಜದ ಉಪಾಧ್ಯಕ್ಷರಾದ ಅಮಿತಾ ವಿ.ಪೈ, ಸ್ವಾಗತಿಸಿದರು. ಇತ್ತೀಚಿಗೆ ನಿಧನರಾದ ಸಮಾಜದ ಹಿರಿಯರಾದ ಎನ್.ಎನ್.ಭಟ್, ನಳಿನಿ ನಾಗೇಶ್ ಪೈ, ಭಾಗ್ಯಲಕ್ಷ್ಮೀ, ಎಸ್.ಕಾಮತ್, ಸತೀಶ್ ಶಾನ್‌ಭಾಗ್, ವೆಂಕಟೇಶ್ ಶಾನಭಾಗ್, ಗೋಕರ್ಣಮಾಯಿ ಇವರೆಲ್ಲರಿಗೂ ಒಂದು ನಿಮಿಷದ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಾಮಾನ್ಯ ಅಂತರ ಹಾಗೂ ಸರಳವಾಗಿ ನಡೆದ ಈ ಸಭೆಯಲ್ಲಿ ಖಜಾಂಚಿ ಆರ್.ವಿ.ಶೆಣೈಯವರು 2019-20ನೇ ಸಾಲಿನ ಲೆಕ್ಕಪತ್ರ ಮಂಡಿಸಿ ಸರ್ವ ಸದಸ್ಯರ ಅನುಮೋದನೆ ಪಡೆದರು. ಸಮಾಜದ ಕಾರ್ಯದರ್ಶಿ ಕೆ.ವೆಂಕಟರಮಣ ಭಟ್ ವಾರ್ಷಿಕ ವರದಿ ಮಂಡಿಸಿದರು. ಕರೋನಾದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಶ್ರೀ ಗಣೇಶೋತ್ಸವವನ್ನು 2021ನೇ ಮಾರ್ಚ್ 2 ರಂದು ಒಂದು ದಿನ ಗಣಹೋಮ, ನಿತ್ಯ ಪೂಜೆ, ರಂಗಪೂಜೆ, ಹೂವಿನ ಪೂಜೆ, ವಿವಿಧ ಆಧ್ಯಾತ್ಮ, ಧಾರ್ಮಿಕ ವಿಧಿ-ವಿಧಾನದೊಂದಿಗೆ ಆಚರಿಸುವುದು. ಸಮಾಜದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳುವುದು ಸಮಾಜದ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.ಸಮಾಜದ ಸಹಕಾರ್ಯದರ್ಶಿ ರಾಜೇಶ್ ಜಿ.ಪ್ರಭು, ಸಮಿತಿ ಸದಸ್ಯರಾದ ರಾಘವೇಂದ್ರ ಕಾಮತ್, ಗಣೇಶ್ ಗೋಪಾಲ್ ತಿಳ್ವೆ, ಗುರುಪ್ರಸಾದ್ ವಿ.ಬಾಳಿಗಾ, ರೇಖಾ ಪ್ರಭು, ಜಯಶ್ರೀ ದೇವದಾಸ್ ಪೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಸಮಿತಿ ಸದಸ್ಯರಾದ ಎಂ.ನರಸಿಂಹ ಕಾಮತ್ ವಂದಿಸಿದರು.