ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮಥ್ರ್ಯ ನಾಟಕಗಳಿಗಿದೆ: ಯಂಡಿಗೇರಿ

ವಿಜಯಪುರ, ಮಾ.30-ನಾಟಕವು ಎಲ್ಲವನ್ನು ಒಳಗೊಂಡ ಸಮಗ್ರ ಕಲೆಯಾಗಿದ್ದು, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ, ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮಥ್ರ್ಯ ನಾಟಕಗಳಿಗಿದೆ. ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಬೆಲೆ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ರಂಗ ಕಲಾ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಟಕ ಪುರಾತನ ಗಂಡು ಕಲೆಯಾಗಿದ್ದು, ರಂಗಭೂಮಿಯು ಬದುಕಿನ ಕನ್ನಡಿ ಹಾಗೂ ನೈಜ ಕಲೆ, ಪ್ರೇಕ್ಷಕರೇ ಇದರ ಜೀವಾಳ ಎಂದರು.
ಜಾಗತೀಕರಣ ಮತ್ತು ಅಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕøತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಇಂದು ಹೆಚ್ಚು ಜನರನ್ನು ತಲುಪುತ್ತಿಲ್ಲ. ಸಿನಿಮಾ, ಟಿವಿ ಕಡೆಗೆ ಆಕರ್ಷಿತರಾಗಿ ನಾಟಕಗಳನ್ನು ನೋಡುವುದನ್ನೆ ಕಡಿಮೆ ಮಾಡಿದ್ದಾರೆ ಎಂದು ವಿಷಾಧಿಸಿದ ಅವರು, ಸಿನಿಮಾ, ಧಾರವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕ ಎಂದಿಗೂ ಜೀವಂತವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಡಾ.ಸೋಮಶೇಖರ ವಾಲಿ ಮಾತನಾಡಿ ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿದಾಗ ಮತ್ತು ಹೆಚ್ಚು ಹೆಚ್ಚು ಪ್ರದರ್ಶನಗಳಾದಾಗ ಮಾತ್ರ ನಾಟಕಗಳ ಸಾರ್ಥಕತೆ ಪಡೆಯುತ್ತವೆ. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಕಲಾವಿದರು ಬದುಕು ಎಷ್ಟೇ ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ, ಮನರಂಜಿಸುತ್ತಾರೆ. ಆಧುನಿಕ ಯುಗದ ಒತ್ತಡಗಳಿಗೆ ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳು ಅವನತಿಗೊಳ್ಳುತ್ತಿವೆ. ರಾಜ್ಯದಲ್ಲಿ ಹಿಂದೊಮ್ಮೆ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಈಗ ಆ ಪರಿಸ್ಥಿತಿ ಇಲ್ಲವಾಗಿದೆ. ಅಳಿದುಳಿದ ಕೆಲವು ವೃತ್ತಿ ರಂಗಭೂಮಿ ಕಂಪನಿಗಳು ಈ ನಾಟಕದ ಪರಂಪರೆಯನ್ನು ಮುಂದುವರೆಸುತ್ತಿವೆ. ಇವರಿಗೆ ನಮ್ಮ ಸಹಕಾರ, ಪೆÇ್ರತ್ಸಾಹ ನೀಡಬೇಕಿದೆ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಸ್ಥಾನದಿಂದ ನಿವೃತ್ತ ಇಂಜಿನಿಯರ್ ಶಂಕರಗೌಡ ಪಾಟೀಲ ಮಾತನಾಡಿದರು ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಸಂಗಮೇಶ ಬದಾಮಿ ಸಂದೇಶ ವಾಚನ ಮಾಡಿದರು. ವೇದಿಕೆ ಮೇಲೆ ರಂಗ ಮೇಳ ವೇದಿಕೆ ಅಧ್ಯಕ್ಷ ಡಿ,ಹೆಚ್ ಕೋಲಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಬಸವರಾಜ ಕುಂಬಾರ, ಸುಭಾಶ್ಚಂದ್ರ ಕನ್ನೂರ್ ಸಿದ್ದನಗೌಡ ಕಾಸಿನ ಕುಂಟೆ,ರವಿ ಕಿತ್ತೂರ್, ಸಿದ್ದಲಿಂಗ ಬಾಗೇವಾಡಿ, ಈರಣ್ಣ ತೊಂಡಿಕಟ್ಟಿ, ಮಯೂರ್ ತಿಳಗೂಳಕರ, ಎಂ,ಐ ಭೇಪಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರಾದ ಸಂಗಮೇಶ ಬದಾಮಿ,
ಮಹಾಂತೇಶ್ ಓಂಕಾರ ವಿಜಯ ಮುಳವಾಡ, ಶಾಂತಯ್ಯ ಹಿರೇಮಠ, ರವೀಂದ್ರ ಮೆಡೆಗಾರ, ಹನುಮಂತ ಕುಲಕರ್ಣಿ, ಶ್ರೀಮತಿ ರುಕ್ಮಿಣಿ ಹೆಗಡೆ, ಶ್ರೀಮತಿ ರಾಜೇಶ್ವರಿ ಜೋಳಕೆ, ಅವರನ್ನು ಸನ್ಮಾನಿಸಲಾಯಿತು.
ವೆಂಕಟೇಶ್ ಹೆಗಡೆ ಮತ್ತು ರುಕ್ಮಿಣಿ ಹೆಗಡೆ ಇವರಿಂದ ರಂಗಗೀತೆಗಳು ಮತ್ತು ಚಿದಾನಂದ, ಪರಶುರಾಮ, ರಮೇಶ, ಎಲ್ಲ ಕಲಾವಿದರಿಂದ ಜಾನಪದ ಗೀತೆಗಳು ಹಾಗೂ ರಂಗ ಸಂಸ್ಥೆಯವರಿಂದ ಮೂನ್ನೂರು ಮುತ್ತು ಎನ್ನುವ ನಾಟಕ ಪ್ರದರ್ಶನಗೊಂಡಿತು ಹಾಗೂ ಕುಮಾರಿ ಸಿಮ್ರಾನ್ ಕೋಲಾರ ರವರಿಂದ ಭರತನಾಟ್ಯ ಪ್ರದರ್ಶನ ಗೊಂಡಿದ್ದು ಕಾರ್ಯಕ್ರಮದಲ್ಲಿ ಅನೇಕ ನಾಟಕ ಕಲಾವಿದರು ಮತ್ತು ರಂಗಪ್ರಿಯರು ನಾಟಕ ವೀಕ್ಷಿಸಿದರು.