ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷ ಸವಿತಾ ಮಹರ್ಷಿ: ಎನ್.ಡಿ.ಕುಮಾರ್

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.೧೭; ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷ, ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಸವಿತಾ ಸಮಾಜ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ಎನ್.ಡಿ. ಕುಮಾರ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭದಲ್ಲಿ ಸವಿತಾ ಮಹರ್ಷಿ ಅವರ ಕುರಿತು ಉಪನ್ಯಾಸ ನೀಡಿದರು.ಚರ್ತುವೇದಗಳಲ್ಲಿ ಒಂದಾದ ಸಂಗೀತ ವೇದ ಎಂದೇ ಕರೆಯಲ್ಪಡುವ ಸಾಮವೇದವನ್ನು ರಚಿಸಿದ ಮಹಾನ್ ಬ್ರಹ್ಮಜ್ಞಾನಿ ಸವಿತಾ ಮಹರ್ಷಿ ಎಂದು ಹೇಳಲಾಗುತ್ತದೆ. ಸಾಮವೇದವು ಸಂಗೀತದ ಮೂಲಗ್ರಂಥವಾಗಿದ್ದು, ಹಾಗಾಗಿ ನಮ್ಮ ಸವಿತಾ ಸಮಾಜದವರು ಸಂಗೀತ, ವೈದ್ಯ ವೃತ್ತಿ ಹಾಗೂ ಕ್ಷೌರಿಕ ವೃತ್ತಿಯನ್ನೂ ಮಾಡಿಕೊಂಡು ಬರುತ್ತಿದ್ದಾರೆ.  ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು, ಸರ್ವರಿಗೂ ದಾರಿದೀಪವಾಗಿದ್ದಾರೆ  ಎಂದು ಹೇಳಿದರು.