ಸಮಾಜದ ಶಾಂತಿಗೆ ಆಧ್ಯಾತ್ಮ ಅವಶ್ಯ


ದೇವದುರ್ಗ.ಜು.೨೦- ಇಂದಿನ ಕಲುಷಿತ ವಾತಾವರಣದಲ್ಲಿ ಭಕ್ತರಿಗೆ ಆಧ್ಯಾತ್ಮ ಬೋಧನೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮಠ ಮಾನ್ಯಗಳ ಪಾತ್ರ ದೊಡ್ಡದಿದೆ.
ಭಕ್ತರು ಹಾಗೂ ಸಮಾಜವನ್ನು ಮಠಗಳು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದು ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗವತ್ಪಾದರು ಹೇಳಿದರು. ಗಬ್ಬೂರು ಗ್ರಾಮದ ಸಾವಿರದೇವರ ಸಂಸ್ಥಾನ ಬಿಚ್ಚಾಲಿ ಹಿರೇಮಠದಲ್ಲಿ ಆಯೋಜಿಸಿದ್ದ ಶ್ರೀ ಚನ್ನವೀರಭದ್ರೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಇಚ್ಚೇಗೆ ಮಾತನಾಡಿದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಅವುಗಳನ್ನು ಮರಳಿ ಮಠಗಳು ಬಿತ್ತುವ ಕೆಲಸ ಮಾಡಬೇಕಿದೆ.
ಮಠಗಳಿಂದ ಸಮಾಜವನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ಕಲ್ಯಾಣ ಮಂಟಪ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕ ವೈಯಕ್ತಿಕವಾಗಿ ಅನುದಾನ ನೀಡಿದ್ದು ಶ್ಲಾಘನೀಯ. ಶ್ರೀಮಠದ ಕಲ್ಯಾಣ ಮಂಟಪ ಬಡವರಿಗೆ ಅನುಕೂಲವಾಗಲಿದೆ.
ಶ್ರೀವೀರಭದ್ರ ಶಿವಾಚಾರ್ಯರ ಮಠಗಳು ಜಿಲ್ಲೆಯ ವಿವಿಧ ಕಡೆಯಿದ್ದು, ಭಕ್ತರನ್ನು ಮಠಗಳನ್ನು ಮುನ್ನಡೆಸುತ್ತಿದ್ದಾರೆ. ಭಕ್ತರಿಂದ ನಡೆಯುವ ಮಠಗಳು, ಸದಾ ಕಾಲ ಭಕ್ತರ ಒಳಿತಿಗಾಗಿ ಸೇವೆ ಮಾಡುತ್ತಿವೆ ಎಂದು ಹೇಳಿದರು.
ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಶ್ರೀಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಶ್ರೀಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶ್ರೀವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಯ್ಯ ತಾತ ಜಾಗಟಗಲ್, ಶರಬಯ್ಯ ತಾತ, ವಿರೂಪಾಕ್ಷಯ್ಯ ತಾತ, ಶಾಸಕರ ತಾಯಿ ಮಹಾದೇವಮ್ಮ ನಾಯಕ ಇತರರಿದ್ದರು.