ಸಮಾಜದ ಯುವಕರಿಗೆ ಕ್ರೀಡೆ ಪ್ರೋತ್ಸಾಹಕಾರಿ – ಶಾಸಕ

ಆರ್ಯವೈಶ್ಯ ಮಹಾಸಭಾ : ಕ್ರಿಕೆಟ್ ಪಂದ್ಯಾವಳಿ
ರಾಯಚೂರು.ಡಿ.೦೨- ಆರ್ಯವೈಶ್ಯ ಸಮುದಾಯದ ಯುವಕರಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಮ್ಮಿಕೊಂಡಿರುವ ಈ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಉತ್ತಮ ಪ್ರಯತ್ನವಾಗಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಅವರಿಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಬೆಂಗಳೂರು ಮತ್ತು ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ರಾಯಚೂರು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಆರ್ಯವೈಶ್ಯ ಸಮುದಾಯವೂ ವಿವಿಧ ಕಾರ್ಯಕ್ರಮ ಮೂಲಕ ತಮ್ಮ ಒತ್ತಡದ ಜೀವನದಿಂದ ಮುಕ್ತವಾಗಿ ಕ್ರೀಡಾ ಚಟುವಟಿಕೆ ಮೂಲಕ ಆರೋಗ್ಯ ಜೀವನ ನಿರ್ವಹಣೆಗೆ ಗಮನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಆರ್ಯವೈಶ್ಯ ಸಮುದಾಯ ವಿವಿಧ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ ಎನ್ನುವುದಕ್ಕೆ ಈ ಕ್ರಿಕೆಟ್ ಪಂದ್ಯಾವಳಿ ಮುನ್ಸೂಚನೆಯಾಗಿದೆಂದರು.
ನಂತರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಕ್ರೀಡಾಪಟುಗಳಿಗೆ ಟಿಶರ್ಟ್ ವಿತರಿಸಿದರೇ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಂಡಾ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಪರುಷೋತ್ತಮರವರು ಅಂಪ್ಯಾಯರ್‌ಗಳಿಗೆ ಕ್ಯಾಪ್ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾಸಭಾ ಹಿರಿಯ ಉಪಾಧ್ಯಕ್ಷರಾದ ಕುಂಟ್ನಾಳ ವೆಂಕಟೇಶ ಅವರು ಟಾಸ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿ ಪೂರ್ವ ಡಾ.ಶಿವರಾಜ ಪಾಟೀಲ್ ಅವರು ಜಟ್ರಂ ಶ್ರೀನಿವಾಸ ಅವರ ಚೆಂಡು ಎಸೆತಕ್ಕೆ ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿ ಆರಂಭಿಸಿದರು. ಒಟ್ಟು ೧೪ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಡಿ.೫ ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕಡಗೋಳ ಆಂಜಿನೇಯ್ಯ, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದ, ಈರಣ್ಣ, ರವೀಂದ್ರ ಜಲ್ದಾರ್, ಹರೀಶ್ ನಾಡಗೌಡ, ಜಗದೀಶ ಗುಪ್ತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.