ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು

ಮಂಗಳೂರು, ಎ.೯-ಸಮಾಜದ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಅದರಲ್ಲೂ ಮಹಿಳೆ ವಿದ್ಯಾವಂತಳಾಗಿ ಸಂಸ್ಕಾರಯುತ ಜೀವನ ಸಾಗಿಸಿದರೆ ಆಕೆಯ ಕುಟುಂಬಕ್ಕೆ ಮಾತ್ರವಲ್ಲ ಆಕೆ ಬೆಳೆದು ಬಂದ ಸಮಾಜಕ್ಕೂ ಶ್ರೇಯಸ್ಸು ಎಂಬುದಾಗಿ ಶಾರದಾ ಪ.ಪೂ.ಕಾಲೇಜಿನ ಉಪನ್ಯಾಸಕಿ ರಶ್ಮಿ ದಿನೇಶ್ ನುಡಿದರು.
ಇತ್ತೀಚೆಗೆ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿದ ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಮಹಾಸಭೆಯಲ್ಲಿ ಅವರು ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು, ದೇವಳದ ೨ನೇ ಮೊಕ್ತೇಸರ್ ಸುಂದರ ಆಚಾರ್ಯ ಬೆಳುವಾಯಿ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶಕುಂತಳಾ ಬಿ.ರಾವ್, ಅಧ್ಯಕ್ಷೆ ವನಿತಾ ಉಪೇಂದ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದರೊಂದಿಗೆ ಧಾರ್ಮಿಕತೆಯನ್ನೂ ಮೈಗೂಡಿಸಿಕೊಂಡು ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತಾಗ ಬೇಕೆಂದು ಅತಿಥಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯದರ್ಶಿ ವಿಶ್ವಕಲಾ ವೈ.ವಿ.,ವರದಿ ವಾಚಿಸಿದರು, ಕೋಶಾಧಿಕಾರಿ ರೇಖಾ ರಾಜಶೇಖರ್ ಲೆಕ್ಕಪತ್ರ ಮಂಡಿಸಿದರು ,ನೂತನ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಜಯಶ್ರೀ ರಾಜೇಶ್ ನಿರ್ವಹಿಸಿದರು, ಪ್ರಫುಲ್ಲ ನಾಗರಾಜ್ ವಂದಿಸಿದರು, ಶ್ರೀಮತಿ ಅರುಣಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.