ಸಮಾಜದ ಡೊಂಕನ್ನು ತಿದ್ದುವುದಕ್ಕೆ ಹಿಡಿದ ಕೈಗನ್ನಡಿ ‘ವಚನ ಸಾಹಿತ್ಯ’

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೨೬; ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ‘ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ’ದ ಅಂಗವಾಗಿ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕೆ.ಟಿ. ನಾಗರಾಜ್ ನಾಯ್ಕ್ ಅಧ್ಯಕ್ಷತೆಯಲ್ಲಿ ಹಾಗೂ ಉಪಸ್ಥಿತರಿದ್ದ ಗಣ್ಯರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಕಸಾಪ ನಿರ್ದೇಶಕರಾದ ಶ್ರೀಮತಿ ಪರಿಮಳ ಜಗದೀಶ್ ದತ್ತಿದಾನಿಗಳನ್ನು ಪರಿಚಯಿಸಿದರು.ತಾಲೂಕು ಕಸಾಪ ನಿರ್ದೇಶಕರಾದ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ನಡೆದುಬಂದ ದಾರಿ ಹಾಗೂ ಕನ್ನಡ ನಾಡು-ನುಡಿ-ಸಂಸ್ಕೃತಿ-ಕಲೆ-ಸಾಹಿತ್ಯಗಳ ಪರಿಚಯ ಮಾಡುವಂತಹ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು. ಹಾಗೂ ಈ ಸಂದರ್ಭದಲ್ಲಿ ದತ್ತಿ ದಾನಿಗಳನ್ನು ಸ್ಮರಿಸಿದರು.ಎಸ್.ಎಸ್.ಎಮ್.ಬಿ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ಅವರು ದತ್ತಿ ಉಪನ್ಯಾಸದಲ್ಲಿ “ವಚನ ಚಳುವಳಿಯಲ್ಲಿ ಮಹಿಳಾ ಅಸ್ಮಿತೆ” ಕುರಿತು ಮಾತನಾಡುತ್ತಾ, ಪ್ರಪಂಚದ ಅತ್ಯದ್ಭುತಗಳಲ್ಲಿ ಒಂದಾದ ‘ವಚನ ಸಾಹಿತ್ಯ’ ನಮ್ಮ ಮನಸ್ಸಿನ ನಮ್ಮ ಸಮಾಜದ ಡೊಂಕನ್ನು ತಿದ್ದುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇತಿಹಾಸ ಸಂಶೋಧಕರಿಗೆ, ನಾಟಕ ರಚನೆಕಾರರಿಗೆ, ಹಾಡು ಕಟ್ಟುವವರಿಗೆ, ಸಮಾಜ ಸುಧಾರಕರಿಗೆ, ಆಧ್ಯಾತ್ಮ ಸಾಧಕರಿಗೆ, ಲೋಕದ ಅನುಭವ ಬಯಸುವವರಿಗೆ ಸ್ಫೂರ್ತಿ ನಮ್ಮ ‘ವಚನ ಸಾಹಿತ್ಯ’ ಎಂದು ಹೇಳಿದರು.ತಮ್ಮ ವಚನಗಳ ಮೂಲಕ ತಮ್ಮ ಅಸ್ಮಿತೆ ಉಳಿಸಿಕೊಂಡ ಶರಣೆ ಲೌಕಿಕ ಸುಖಭೋಗಗಳನ್ನು ತೊರೆದು ಅಲೌಕಿಕ ಜ್ಞಾನದಿಂದ ಶರಣೆಯರ ಕಣ್ಮಣಿ ಅಕ್ಕಮಹಾದೇವಿ,  ಲಂಚವಂಚನೆಗೆ ಕೈಯೊಡ್ಡಲ್ಲ ದಾರಿಯಲ್ಲಿ ಬಿದ್ದ ಅನ್ಯರ ಒಡವೆ-ವಸ್ತು ಮುಟ್ಟಲ್ಲವೆಂದು ತನಗೆ ತಾನೇ ನಿರ್ಬಂಧ ಹಾಕಿಕೊಂಡ ಸತ್ಯಸಾಧಕಿ ಶರಣೆ ಸತ್ಯಕ್ಕ, ಕಾಯಕವೇ ಮೇಲೆಂದು ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು ಆಯ್ದಕ್ಕಿ ಲಕ್ಕಮ್ಮ, ವಿಶಾಲ ಮನೋಭಾವನೆ ದಿಟ್ಟ ವ್ಯಕ್ತಿತ್ವ ಸ್ವತಂತ್ರ ಪ್ರವೃತ್ತಿಯುಳ್ಳ ಮುಕ್ತಾಯಕ್ಕ, ಕಾಯದ ಪ್ರಾಣದ ಪ್ರಸಾದವ ಇಹಪರದ ಹಂಗು ನಮಗಿಲ್ಲ ಎಂದು ನುಡಿದ ಶರಣೆ ನೀಲಾಂಬಿಕೆಯನ್ನು ಅವರ ವಚನಗಳ ಮೂಲಕ ಸ್ಮರಿಸಿದರು.ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯ್ಯಪ್ಪ ಮಾತನಾಡಿ, ಹೆಣ್ಣು ಬಾಹ್ಯ ಸೌಂದರ್ಯಕ್ಕಷ್ಟೇ ಬೆಲೆ ಕೊಡದೇ ಆಂತರಿಕ ಸೌಂದರ್ಯವನ್ನೂ ಬೆಳೆಸಿಕೊಳ್ಳಬೇಕು. ತಾನೂ ಬೆಳೆದು ಕುಟುಂಬ ಹಾಗೂ ಸಮಾಜವನ್ನು ನೈತಿಕ ನೆಲೆಗಟ್ಟಿನಲ್ಲಿ ನಿಲ್ಲಿಸುವುದು ಅವಳ ಮಹತ್ವದ ಜವಾಬ್ದಾರಿಯಾಗಿದೆ. ಮಹಿಳೆ ಎಂತಹ ಮಹತ್ವದ ಸ್ಥಾನವನ್ನು ಅಲಂಕರಿಸಿದ್ದರೂ ತಾನೊಂದು ಹೆಣ್ಣೆಂಬುದನ್ನು ಎಂದೂ ಮರೆಯಬಾರದು. ತನ್ನ ಹೆಣ್ತನದ ಮೂಲ ಬೇರುಗಳಲ್ಲಿ ಅಡಗಿರುವ ಅಕ್ಕರೆಯ ಅನುಭೂತಿ ಮಾಸಲು ಎಂದೂ ಬಿಡಬಾರದು ಎಂದು ಕಿವಿಮಾತು ಹೇಳಿದರು.ವೇದಿಕೆಯಲ್ಲಿ ತಾಲೂಕು ಕಸಾಪ ನಿರ್ದೇಶಕರಾದ ಶ್ರೀಮತಿ ಮಮತಾ ರುದ್ರಮುನಿ, ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಅಧ್ಯಾಪಕರುಗಳು ಹಾಗೂ ಪ್ರಶಿಕ್ಷಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕು.ಭಾವನಾ ಪ್ರಾರ್ಥಿಸಿದರು. ಕು.ಲತಾ ಕೆ.ಟಿ. ಸ್ವಾಗತಿಸಿದರು. ಕು.ಪೂಜಾ ಎಂ. ವಂದಿಸಿದರು. ಕು.ಸಿಂಧು ಟಿ.ಎಸ್. ನಿರೂಪಿಸಿದರು.