ಸಮಾಜದ ಆಗು-ಹೋಗುಗಳ ಪ್ರತಿಬಿಂಬ ಪತ್ರಿಕೋದ್ಯಮ

ಕಮಲನಗರ(ಬೀದರ):ಜು.31:ಪತ್ರಕರ್ತರು ಸದಾ ಕ್ರಿಯಾಶೀಲರು, ಧೈರ್ಯವಂತರೂ ಆಗಿರಬೇಕು. ಸ್ಥಳೀಯ ಸಮಸ್ಯೆಗಳ ಧ್ವನಿಯಾಗಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವಾಗಿರುವ ಪತ್ರಿಕೋದ್ಯಮವು, ಸಮಾಜದ ಆಗು-ಹೋಗುಗಳ ಪ್ರತಿಬಿಂಬವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢ ಶಾಲೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶನಿವಾರ ಮಾತನಾಡಿದ ಅವರು, ಗ್ರಾಮೀಣ ಭಾಗದ ಪತ್ರಕರ್ತರ ಕೆಲಸ ಸವಾಲಿನಿಂದ ಕೂಡಿರುತ್ತದೆ. ನೂರಾರು ಸಮಸ್ಯೆಗಳಿರುವ ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಯಾಶೀಲತೆ ಹಾಗೂ ಜಾಗೃತಿಯಿಂದ ಕೆಲಸ ನಿರ್ವಹಿಸಬೇಕಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಗ್ರಾಮೀಣ ಭಾಗದ ಪತ್ರಕರ್ತರು ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಕ್ಲಬ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರಕಾಶ ಟೊಣ್ಣೆ ಮಾತನಾಡಿ, ಎಲ್ಲರನ್ನು ಸಮಾನರು ಎಂದು ಪರಿಗಣಿಸುವ ಪ್ರಜಾಪ್ರಭುತ್ವವನ್ನು ಕಾಯುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ. ಹೆಚ್ಚು ಕ್ರಿಯಾಶೀಲವಾಗಿರುವ ಈ ಕ್ಷೇತ್ರ ಅತ್ಯಂತ ಸವಾಲಿನದ್ದಾಗಿದೆ. ಪತ್ರಕರ್ತರಿಗೆ ಭದ್ರತೆ ಜತೆಗೆ ಸೇವಾಭದ್ರತೆ ಕೊಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುವ ಅಗತ್ಯವಿದೆ ಎಂದರು.

ಸಮಾಜ ಸೇವಕ ಗುರುನಾಥ ವಡ್ಡೆ ಮಾತನಾಡಿ, ಗ್ರಾಮೀಣ ಪತ್ರಕರ್ತರು ಸದಾ ಕಾರ್ಯನಿರತರಾಗಿದ್ದರೂ ಕೂಡ ಆರ್ಥಿಕ ಸೌಲಭ್ಯ ಮತ್ತಿತರ ಸವಲತ್ತುಗಳು ಇರುವುದಿಲ್ಲ. ಆದರೂ ಇದನ್ನು ಲೆಕ್ಕಿಸದೇ ಕರ್ತವ್ಯಕ್ಕೆ ನ್ಯಾಯ ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಗರೀಶ ಒಡೆಯರ್ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಅಧ್ಯಕ್ಷ ಶಿವಕುಮಾರ ಝುಲ್ಪೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಿಂಗಾನಂದ ಮಹಾಜನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್, ಸುಭಾಷ ಮಿರ್ಚೆ, ಹಿರಿಯ ಪತ್ರಕರ್ತ ವೈಜಿನಾಥ ವಡ್ಡೆ, ಡಾ.ಎಸ್.ಎಸ್.ಮೈನಾಳೆ, ಸಾಹಿತಿ ಎಂ.ಎ.ಪಾಟೀಲ್, ಪ್ರಭು ಕಳಸೆ, ಸುಭಾಷ ಬಿರಾದಾರ, ಚನ್ನಬಸವ ಘಾಳೆ, ಉಮಾಕಾಂತ ಮಹಾಜನ, ಯಶವಂತ ಬಿರಾದಾರ, ಸಾಯಿನಾಥ ಕಾಂಬಳೆ, ಶಿವರಾಜ ಪಾಟೀಲ್, ಸುಭಾಷ ಬಿರಾದಾರ, ಇಂದ್ರಜೀತ ಗವಳಿ ಇತರರಿದ್ದರು.

ಅನ್ನಪೂರ್ಣ ಮಹಾಜನ ತಂಡದವರು ನಾಡಗೀತೆ ಹಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮನೋಜಕುಮಾರ ಹಿರೇಮಠ ಸ್ವಾಗತಿಸಿದರು. ಬಂಟಿ ರಾಂಪುರೆ ವಂದಿಸಿದರು. ಮಾದಪ್ಪಾ ಮಡಿವಾಳ ನಿರೂಪಿಸಿದರು.

ಕಮಲನಗರ ತಾಲೂಕಿನ ಕಾರ್ಯನಿರತ ಪತ್ರಕರ್ತರನ್ನು ಕಸಾಪ ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.