ಸಮಾಜದ ಅಭಿವೃದ್ಧಿಯಲ್ಲಿ ಕೆಂಪನಂಜಮ್ಮಣ್ಣಿ ಮಾದರಿ: ತ್ರಿಷಿಕಾಕುಮಾರಿ

ಸಂಜೆವಾಣಿ ನ್ಯೂಸ್
ಮೈಸೂರು: ಜು.10:- ಸಮಾಜದ ಸುಧಾರಣೆಗೆ ಮಹಿಳೆಯರು ಹಲವಾರು ಕೊಡುಗೆಗಳನ್ನು ನೀಡಿ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಿದ ಮಹಿಳೆಯರಲ್ಲಿ ರಾಜ ಮನೆತನದ ಕೆಂಪನಂಜಮ್ಮಣ್ಣಿ ಸದಾ ಮಾದರಿಯಾಗಿದ್ದಾರೆ ಎಂದು ರಾಜವಶಸ್ಥೆ ತ್ರಿಷಿಕಾಕುಮಾರಿ ತಿಳಿಸಿದರು.
ಅರಸು ಮಂಡಳಿ ಸಂಘದವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಸಂಘದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾತೃಶ್ರೀ ಕೆಂಪನಂಜಮ್ಮಣ್ಣಿ ವಿಲಾಸ ಸನ್ನಿಧಾನ ಅವರ 157ನೇ ವರ್ಧಂತಿ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಏಳಿಗೆಗೆ ಶ್ರಮಿಸಿದವರ ಸೇವೆಯನ್ನು ನಾವು ಮರೆಯಬಾರದು. ಮೈಸೂರು ರಾಜ ಮನೆತನದ ಕೆಂಪನಂಜಮ್ಮಣ್ಣಿ ವಿಲಾಸ ಸನ್ನಿಧಾನ ಕೂಡ ಪ್ರಮುಖವಾಗಿದ್ದು, ಅವರನ್ನು ಮತ್ತು ಅವರ ಕೊಡುಗೆಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಾಲಕರಾಗಿದ್ದಾಗ ಅಧಿಕಾರವನ್ನು ವಹಿಸಿಕೊಂಡ ಕೆಂಪನಂಜಮ್ಮಣ್ಣಿ ಅವರು, ಆಡಳಿತವನ್ನು ಸುಸೂತ್ರವಾಗಿ ನಿಭಾಯಿಸಿದರು. ಅಲ್ಲದೇ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ ಅವರ ಆದರ್ಶಗಳನ್ನು ಅನುಕರಣೆ ಮಾಡಬೇಕು.ಅರಸು ಮಂಡಳಿ ಸಂಘದ ಸಮಾಜದ ಸೇವಾ ಕಾರ್ಯಗಳು ಮುಂದುವರೆಯಲಿ ನಾನು ಕೂಡು ಸಂಘದ ಎಲ್ಲ ಸಾಮಾಜಿಕ ಕೆಲಸಗಳಿಗೂ ಕೈಜೋಡಿಸುತ್ತೇನೆ ಎಂದು ಹೇಳಿದರು.
ಶ್ರೀಚಾಮರಾಜೇಂದ್ರ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷರಾದ ಡಾ.ಭಾರತಿ ಅರಸ್ ಮಾತನಾಡಿ, ರಾಜಮಹಾರಾಜರು ಎಂದರೆ ಯುದ್ಧವಲ್ಲ. ಅಭಿವೃದ್ಧಿಯ ಮೂಲಕ ಸಮಾಜವನ್ನು ಕಟ್ಟಬಹುದು ಎಂಬುದಕ್ಕೆ ಮೈಸೂರು ರಾಜರು ತೋರಿಸಿದ್ದಾರೆ. ಅದರಂತೆ ಕೆಂಪನಂಜಮ್ಮಣ್ಣಿ ಕತ್ತಿ ಹಿಡಿದು ಹೋರಾಡಲಿಲ್ಲ, ಲೇಖನಿಯಲ್ಲಿ ಬರೆದು ಕ್ರಾಂತಿ ಮಾಡಲಿಲ್ಲ. ಬದಲಾಗಿ ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಹೆಸರುವಾಸಿಯಾದರು ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜರಿಗೆ ರಾಜನೀತಿಯ ಹಿತೋಪದೇಶಗಳನ್ನು ಮಾಡುತ್ತಿದ್ದ ಅವರ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯನ್ನು ವಾಣಿವಿಲಾಸ ಚರಿತ ಕೃತಿಯು ಅನುಕೂಲವಾಗುತ್ತದೆ. ಅವರ ಕೆಂಪನಂಜಮ್ಮಣ್ಣಿ ಅವರ ಸಾಮಾಜಿಕ ಕೆಲಸಗಳನ್ನು ನಾವು ಸದಾ ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಎಆರ್‍ಎಲ್ ವಿಜ್ಞಾನಿ ರಾಧಿಕಾ ಮದನ್ ಅರಸ್, ಎಲ್‍ಐಸಿಯ ಸಹಾಯಕ ವಿಭಾಗೀಯ ವ್ಯವಸ್ಥಾಪಕರಾದ ಬಿ.ಕೆ.ಗಿರಿಜಾ ಅರಸ್, ಶ್ರೀಚಾಮರಾಜೇಂದ್ರ ಎಜುಕೇಷನ್ ಟ್ರಸ್ಟ್ ನ ಟ್ರಸ್ಟಿ ಪದ್ಮಶ್ರೀ ಅರಸ್ ಚಿದಾನಂದ್, ಛಾರ್ವಿ ಡೆಂಟಲ್ ಕೇರ್‍ನ ದಂತ ಚಿಕಿತ್ಸಕರಾದ ಡಾ.ಎಂ.ವಿ.ಶಿಲ್ವಾ ಅರಸ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಅನ್ನು ವಿತರಿಸಲಾಯಿತು.
ಉಪ ಮೇಯರ್ ಡಾ.ರೂಪಾ ಯೋಗೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಸಂಘದ ಅಧ್ಯಕ್ಷರಾದ ಎಸ್.ಲಿಂಗರಾಜೇ ಅರಸ್ ಮತ್ತಿತರರು ಇದ್ದರು.