ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹು ಮುಖ್ಯ

ರಾಯಚೂರು,ಜ.೧೬- ಅತ್ಯಂತ ಬಲಿಷ್ಠವಾದ ಸಮಾಜ ಭೋವಿ ಸಮಾಜವಾಗಿದ್ದು, ಈ ಸಮಾಜ ಇನ್ನೂ ಬಲಿಷ್ಠವಾಗಬೇಕಾದರೆ ಸಮಾಜದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಆಗ ಮಾತ್ರ ಭೋವಿ ಸಮಾಜದ ಮಕ್ಕಳು ಸುಂಧರ ಭವಿಷ್ಯವನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರು ಜ.೧೫ರ(ಭಾನುವಾರ) ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಅರಮನೆಯಲ್ಲಿ ಹಾಗೂ ಮನೆಗಳಲ್ಲಿ ವಾಸ ಮಾಡಲು ಕಾರಣರು ಭೋವಿ ಸಮಾಜದವರು. ಭೋವಿ ಸಮಾಜದವರು ಕಲ್ಲು ಹೊಡೆಯುವ ಮನೆ ಕಟ್ಟುವ ಕಾಯಕವನ್ನು ಮಾಡುತ್ತಾರೆ ಆದ್ದರಿಂದಲೇ ಅವರು ಅತ್ಯಂತ ಶಕ್ತಿಶಾಲಿಯಾಗಿರುತ್ತಾರೆ. ಇಂತಹ ಸಮಾಜ ಅಭಿವೃದ್ಧಿ ಹೊಂದುವುದು ಅತ್ಯವಶ್ಯಕವಾಗಿದ್ದು, ಭೋವಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಎಂದಿಗೂ ಬದ್ಧವಾಗಿರುತ್ತದೆ ಎಂದರು.
ಸಮಾಜದಲ್ಲಿ ಒಂದು ಸಮುದಾಯ ಮುಂದೆ ಬರಬೇಕಾದರೆ ಅದಕ್ಕೆ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ಅವರು ಸುಂದರ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಶಿಕ್ಷಣ ಸಾಲ, ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ಸಿದ್ದರಾಮೇಶ್ವರ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ತುರಕನಡೋಣಿ ಶಿಕ್ಷಕ ಆಂಜಿನೇಯ್ಯ ಉಪನ್ಯಾಸ ನೀಡಿ ಭಾರತ ದೇಶ ಶರಣರು, ಸಂತರು, ತತ್ವಜ್ಞಾನಿಗಳು, ಚಿಂತಕರು ಹಾಗೂ ಋಷಿಮುನಿಗಳು ಹುಟ್ಟಿದ ಪುಣ್ಯಭೂಮಿಯಾಗಿದ್ದು, ಇಂತಹ ನಾಡಿನಲ್ಲಿ ಸಿದ್ದರಾಮೇಶ್ವರರು ಜನಿಸಿ ಸಮಾಜಕ್ಕೆ ಉತ್ತಮ ಮಾರ್ಗ ಹಾಕಿಕೊಟ್ಟಿದ್ದಾರೆ ಎಂದರು.
ಬಾಲ್ಯದಿಂದಲೂ ದೈವತ್ವದ ಮಾರ್ಗದಲ್ಲಿ ನಡೆದಿದ್ದ ಸಿದ್ದರಾಮೇಶ್ವರರು, ಬಾಲ್ಯದಿಂದಲೇ ಉತ್ತಮ ಜ್ಞಾನವನ್ನು ಪಡೆದು ನಾಡಿಗೆ ಹೆಸರುವಾಸಿಯಾದವರಾಗಿದ್ದು, ಸಿದ್ದರಾಮೇಶ್ವರರಂತೆ ಜ್ಞಾನಿಯಾಗಲು ಮಕ್ಕಳಿಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ ಹನುಮಂತಪ್ಪ, ಶಶಿಕಲಾ ಭೀಮರಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆ: ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೂ ಮೊದಲು ನಗರದ ಶಿವಯೋಗಿ ಸಿದ್ದರಾಮೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಸಿದ್ದರಾಮೇಶ್ವರ ವೃತ್ತದಿಂದ ಕನ್ನಡ ಭವನದವರೆಗೆ ಕಲಾತಂಡಗಳೊಂದಿಗೆ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಮುಖಂಡರಾದ ಎನ್.ಎಸ್ ಬೋಸರಾಜು, ಮುಜೀಬುದ್ದೀನ್, ಶಶಿಕಲಾ ಭೀಮರಾಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.