ಸಮಾಜದ ಅಭಿವೃದ್ಧಿಗೆ ಮಠಮಾನ್ಯಗಳ ಅಭಿವೃದ್ಧಿ ಅವಶ್ಯ

ಸವಣೂರ,ಜ.13: ಸಮಾಜ ಅಭಿವೃದ್ಧಿಗಾಗಿ ಮಠಮಾನ್ಯಗಳನ್ನು ಅಭಿವೃದ್ಧಿ ಪಡೆಸುವದು ಅವಶ್ಯವಾಗಿದೆ. ಆದ್ದರಿಂದ, ಹಾಲುಮತ ಕುರುಬರ ಜನಾಂಗದ ಗುರುಸ್ವಾಮಿಗಳ ಮಠವನ್ನು ಅಭಿವೃದ್ಧಿ ಪಡೆಸಲು ಸರ್ವ ಸಮಾಜದವರು ಮುಂದಾಗಬೇಕು ಎಂದು ಕೆಂಡದಸ್ವಾಮಿಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹುರಳೀಕುಪ್ಪಿ ಗ್ರಾಮದಲ್ಲಿ ಏರ್ಪಡಿಸಿದ್ದ ಬಂಕಾಪೂರ ಗ್ರಾಮದಲ್ಲಿರುವ ಕೆಂಡದಸ್ವಾಮಿಮಠದ ಜೀರ್ಣೋದ್ಧಾರಕ್ಕಾಗಿ ದೇಣಿಗಿ ಸಂಗ್ರಹಕ್ಕೆ ಶ್ರೀಗಳ ಪಾದಯಾತ್ರೆ ಚಾಲನೆ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಂಕಾಪೂರ ಗ್ರಾಮದಲ್ಲಿರುವ ಕೆಂಡದಸ್ವಾಮಿಮಠದ ಜೀರ್ಣೋದ್ಧಾರಕ್ಕಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಳಿ ಶಕ್ತಿ ಅನುಸಾರ ಭಕ್ತಿಯ ಸೇವೆಯನ್ನು ದೇಣಿಗೆಯ ರೂಪದಲ್ಲಿ ಪಡೆಯುವ ಇಚ್ಚೆಯಿಂದ ಪ್ರತಿ ಗ್ರಾಮದ ಭಕ್ತರ ಮನೆಗೆ ತೆರಳಿ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ. ಸಮಾಜ ಬಾಂಧವರು ತಮ್ಮ ತಮ್ಮ ಶಕ್ತಿ ಅನುಸಾರ ಭಕ್ತಿಯ ಕಾಣಿಕೆಯನ್ನು ಸಲ್ಲಿಸಿ ಮಠದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಹಾಲುಮತ ಸಮಾಜದ ಮುಖಂಡ ಮುದ್ದಕಪ್ಪ ಅಜ್ಜಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಉದ್ದಾರಕ್ಕಾಗಿ ಮೂಲ ಗುರುವಿನ ಮಠದ ಅಭಿವೃದ್ಧಿ ಅವಶ್ಯವಾಗಿದೆ. ಶ್ರೀಗಳು ಮಠದ ಅಭಿವೃದ್ಧಿಗಾಗಿ ಜೋಳಿಗೆ ಹಾಕಿದ್ದಾರೆ. ಸಮಾಜ ಬಾಂಧವರು ಭಕ್ತಿಯ ಕಾಣಿಕೆಯನ್ನು ಸಲ್ಲಿಸುವ ಮೂಲಕ ಶ್ರೀಗಳಿಗೆ ಶಕ್ತಿಯನ್ನು ನೀಡಬೇಕು ಎಂದರು.
ಬಸಯ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸಯ್ಯಸ್ವಾಮೀಜಿ ಪಾಧಯಾತ್ರೆ ಕೈಗೊಂಡು ಸುಮಾರು 2 ಲಕ್ಷ ರೂಗಳ ದೇಣಿಗೆಯನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ದುರಗಪ್ಪ ಅಪ್ಪಮಲ್ಲಪ್ಪನವರ, ನಿಂಗಪ್ಪ ಎರೇಶೀಮಿ, ಬೀರಪ್ಪ ಕೊಳ್ಳವರ, ಉಡಚಪ್ಪ ಮಾನೇಗಾರ, ಲಕ್ಷ್ಮಣ್ಣ ಡಮ್ಮಳ್ಳಿ, ಸಿದ್ದಪ್ಪ ಕಳ್ಳಿ ಹಾಗೂ ಇತರರು ಪಾಲ್ಗೊಂಡಿದ್ದರು.