ಸಮಾಜದಲ್ಲೇ ದೇವರು ಕಂಡಿದ್ದ ಹಾನಗಲ್ ಶ್ರೀ

ಬೀದರ್:ಸೆ.15: ಹಾನಗಲ್ ಕುಮಾರ ಶಿವಯೋಗಿಗಳು ಸಮಾಜ ಸೇವೆಯಲ್ಲೇ ದೇವರನ್ನು ಕಂಡಿದ್ದರು ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಹಾನಗಲ್ ಕುಮಾರ ಶಿವಯೋಗಿ ಅವರ 156ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀಗಳು ಸಮಾಜ ದೇವೋಭವ ಎಂದಿದ್ದರು. ತಮ್ಮ ಇಡೀ ಬದುಕನ್ನು ಸಮಾಜ ಸೇವೆಗಾಗಿಯೇ ಮುಡುಪಾಗಿಟ್ಟಿದ್ದ ಅಪರೂಪದ ಸಂತರಾಗಿದ್ದರು. ಲಿಂಗೈಕ್ಯರಾಗುವ ವೇಳೆ ತಮ್ಮ ಆರೋಗ್ಯ ವಿಚಾರಿಸಲು ಬಂದಿದ್ದವರಿಗೆ ಸಮಾಜದ ಆರೋಗ್ಯವನ್ನೇ ವಿಚಾರಿಸಿದ್ದರು ಎಂದು ತಿಳಿಸಿದರು.
ಸಮಾಜ ಒಗ್ಗೂಡಿಸಲು ಅವಿರತ ಶ್ರಮಿಸಿದ್ದರು. ಮಠ ಮಾನ್ಯಗಳು, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆ ಹುಟ್ಟು ಹಾಕಿದ್ದರು. ಸ್ವಾಮೀಜಿಗಳನ್ನು ತಯಾರು ಮಾಡುವ ಶಿವಯೋಗ ಮಂದಿರ ಕಟ್ಟಿದ್ದರು. ಗ್ರಾಮ, ಗ್ರಾಮಗಳಲ್ಲೂ ಮಠಗಳ ಸ್ಥಾಪನೆ, ಧಾರ್ಮಿಕ ಜಾಗೃತಿಗೆ ಕಾರಣರಾಗಿದ್ದರು ಎಂದು ಹೇಳಿದರು.
ಶ್ರೀಗಳು ಸಮಾಜದ ನಂದಾದೀಪವಾಗಿದ್ದಾರೆ. ಅವರ ಕಾರ್ಯಗಳು ಚಿರಸ್ಥಾಯಿಯಾಗಿ ಉಳಿಯಲಿವೆ ಎಂದು ತಿಳಿಸಿದರು.
ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನ ಚಲುವಾ, ರಮೇಶ ಪ್ರಭಾ, ಧನರಾಜ ಪಾಟೀಲ, ಬಸಯ್ಯ ಸ್ವಾಮಿ, ಶೇಖರ ಜಡಗೆ, ಕರಬಸಪ್ಪ ಬಿರಾದಾರ, ಶರಣಪ್ಪ ಫುಲಾರಿ, ಅಶೋಕ ಸ್ವಾಮಿ, ಕಾರ್ತಿಕ ಸ್ವಾಮಿ, ರಾಜಕುಮಾರ ಪ್ರಭಾ ಮೊದಲಾದವರು ಇದ್ದರು.