ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆ : ಎಚ್.ಕೆ.ವಿವೇಕಾನಂದ ವಿಷಾದ

ಕಂಪ್ಲಿ, ಮಾ.26-ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಭ್ರಷ್ಟಾಚಾರ, ಜಾತೀಯತೆ ತಾಂಡವವಾಡುತ್ತಿವೆ ಎಂದು ಜ್ಞಾನ ಭಿಕ್ಷಾ ಪಾದಯಾತ್ರಿಕ ಎಚ್.ಕೆ.ವಿವೇಕಾನಂದ ಹೇಳಿದರು.
ಪಟ್ಟಣದ ಗಂಗಾಸಂಕೀರ್ಣದಲ್ಲಿ ಗುರುವಾರದಂದು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 128ನೇ ಮಹಾಮನೆಯಲ್ಲಿ ಶರಣರ ಮೌಲ್ಯಗಳು ಮತ್ತು ಪ್ರಸ್ತುತ ಸಮಾಜ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಸಂಕಲ್ಪಿಸಿ ಕಳೆದ 145ದಿನಗಳಿಂದ ಬೀದರ್ ಜಿಲ್ಲೆಯ ಔರದ್‍ನಿಂದ ಜ್ಞಾನ ಭಿಕ್ಷಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸ್ವಾಸ್ಥ್ಯ ಸಮಾಜ ನಿಮಾಣಕ್ಕೆ ಅಗತ್ಯವಿರುವ ಮಾನವೀಯ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಪ್ರಸ್ತುತ ದಿನಗಳಲ್ಲಿ ಜನನ ಮರಣ ಪತ್ರಗಳಿಗೂ ಲಂಚ ನೀಡಿ ಪ್ರಮಾಣಪತ್ರ ಪಡೆಯಬೇಕಾದ ದುಸ್ಥಿತಿ ಎದುರಾಗಿದೆ. ಹಣದ ಗೀಳಿನಿಂದಾಗಿ ಗಾಳಿ, ನೀರು, ಭೂಮಿ ಎಲ್ಲವನ್ನು ಕಲುಷಿತಗೊಳಿಸಿದ್ದು ರಾಸಾಯನಿಕಮಿಶ್ರತ ಆಹಾರ ಸೇವಿಸುವಂತಾಗಿದೆ. ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಧಾರವಾಹಿ ವೀಕ್ಷಣೆ ಮಾಡುವವರ ಸಂಖ್ಯೆ ಹೇರಳವಾಗುತ್ತಿರುವುದು ವಿಷಾಧನೀಯ ಸಂಗತಿ. ಮಠಾಧೀಶರು ಸರ್ವಸಂಗ ಪರಿತ್ಯಾಗಿಗಳಾಗುವ ಬದಲಿಗೆ ಫೈಲ್‍ಗಳ ಹಿಡಿದು ಟೇಬಲ್ ಟೇಬಲ್ ತಿರುಗುವ ಮೂಲಕ ಜಾತಿವಾದಿಗಳಾಗಿ, ವ್ಯಾಪಾರಿಗಳಾಗಿ ಮಾರ್ಪಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ವಾಸಿಸಲು ಯೋಗ್ಯವಲ್ಲದ ಮನೆಗಳಲ್ಲಿ ಜನತೆ ವಾಸವಿದ್ದಾರೆ. ಹಣ, ಅಧಿಕಾರ, ಪ್ರಚಾರ ವ್ಯಾಮೋಹದಿಂದ ಮಾನವೀಯ ಮೌಲ್ಯಗಳು, ಸಂಸ್ಕಾರ ನಾಶವಾಗುತ್ತಿವೆ. ಒಂದು ವರ್ಷದೊಳಗೆ ರಾಜ್ಯದ 1ಕೋಟಿ ಜನರನ್ನು ಭೇಟಿಯಾಗಿ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅನುಷ್ಠಾನಗೊಳಿಸಿಕೊಳ್ಳುವಂತೆ ಪ್ರೇರೇಪಿಸಿ, 15ವರ್ಷದೊಳಗೆ ಭ್ರಷ್ಟರಹಿತ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳುಳ್ಳ ರಾಜ್ಯವನ್ನು ನಿರ್ಮಿಸುವ ಸಂಕಲ್ಪ ಹೊಂದಿದ್ದೇನೆ ಎಂದರು.
ತಾಲೂಕು ಶ.ಸಾ.ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ವಯಂ ಬದಲಾಗದೆ ಜಗತ್ತು ಬದಲಾಗದ್ದರಿಂದ ಸ್ವಯಂ ಬದಲಾವಣೆಗೆ ಮುಂದಾಗಬೇಕು. ಸರಳ ಜೀವನ ಅಳವಡಿಸಿಕೊಳ್ಳುವ ಮೂಲಕ ಮಾದರಿಯಾಗಬೇಕು ಎಂದರು.
ಸಂವಾದದಲ್ಲಿ ಪ್ರಸ್ತುತ ಸಮಾಜ, ಧರ್ಮಗಳಲ್ಲಿನ ಅನೈತಿಕತೆ, ಅಧರ್ಮ, ಅರಾಜಕತೆ ಮೊದಲಾದ ಅನಪೇಕ್ಷಿತ ತಲ್ಲಣಗಳ ಕುರಿತು ಸಂವಾದ ನಡೆಸಲಾಯಿತು.
ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಡಾ.ಜಂಬುನಾಥಗೌಡ, ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಬಡಿಗೇರ ಜಿಲಾನ್, ನ್ಯಾಯವಾದಿ ಎಚ್.ನಾಗರಾಜ್, ಉಳ್ಳಾಗಡ್ಡಿ ಮಲ್ಲಯ್ಯ, ಕರೇಕಲ್ ಶಂಕ್ರಪ್ಪ, ಎಂ.ಎಸ್.ಮುನ್ನಾ, ಕೆ.ಯಂಕಾರೆಡ್ಡಿ, ಅಂಬಿಗರ ಮಂಜುನಾಥ, ಕೆ.ವಿರುಪಾಕ್ಷಪ್ಪ, ಜಿ.ಪುಷ್ಪಾಪ್ರಕಾಶ್, ಉಮಾದೇವಿ, ಬುರೆಡ್ಡಿ ನಟರಾಜ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.