ಸಮಾಜದಲ್ಲಿ ಮಹಿಳೆಯ ಪಾತ್ರ ಅನನ್ಯ : ಡಾ.ಜಯದೇವಿ ತೇಲಿ

ಔರಾದ :ಮಾ.31: ಈ ಸೃಷ್ಟಿಯಲ್ಲಿ ಹೆಣ್ಣಿಗೆ ಒಂದು ವಿಶೇಷ ಸ್ಥಾನಮಾನವಿದೆ. ಹೆಣ್ಣು ಈ ಜಗದ ಕಣ್ಣು ಎನ್ನುತ್ತಾರೆ. ಪ್ರತಿಯೊಂದು ಕ್ಷೆ?ತ್ರಗಳಲ್ಲೂ ಹೆಣ್ಣು ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದಾಳೆ ಸಮಾಜದಲ್ಲಿ ಮಹಿಳೆಯ ಪಾತ್ರ ಅನನ್ಯವಾಗಿದೆ ಎಂದು ಡಾ.ಜಯದೇವಿ ತೇಲಿ ನುಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೇದಗಳ ಕಾಲದಿಂದಲೂ ಮಹಿಳೆಯರಿಗೆ ಸಮಾನವಾದ ಅವಕಾಶಗಳಿದ್ದು ಅಂದಿನ ಸಮಾಜವು ಅವರಿಗೆ ಉತ್ತಮ ಸ್ಥಾನಮಾನ ಹಾಗೂ ಗೌರವವನ್ನು ನೀಡಿತು. ಆದರೆ ಮಧ್ಯಕಾಲದಲ್ಲಿ ಬಾಲ್ಯ ವಿವಾಹ ಹಾಗೂ ಸತಿ ಸಹಗಮನ ಇಂಥ ಅಮಾನುಷ ಪದ್ಧತಿಗಳಿಂದ ಮಹಿಳೆಯರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು. ನಂತರ 12ನೇ ಶತಮಾನದಲ್ಲಿ ಬಸವಣ್ಣನವರ ಸಮಾನತೆಯ ಕ್ರಾಂತಿಯಿಂದ ಮಹಿಳೆಯರು ಸಮಾನವಾದ ಅವಕಾಶಗಳು ಪಡೆದುಕೊಂಡರು. ಅಲ್ಲದೇ ಇಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಸಮಾನವಾದ ಹಕ್ಕುಗಳು, ಅವಕಾಶಗಳು ನೀಡಿರುವುದರಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿದ್ದಾರೆ. ಅದಕ್ಕಾಗಿ ಇಂದಿನ ಹೆಣ್ಣು ಮಕ್ಕಳು ನಿರಂತರ ಪ್ರಯತ್ನ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕೆಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ ಅವರು ಮಾತನಾಡಿ ಭಾರತದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ ಆಗಿದ್ದರು, ಈಗಿನ ರಾಷ್ಟ್ರಪತಿ ಕೂಡ ಶ್ರೀಮತಿ ದ್ರೌಪದಿ ಮುರ್ಮು ಆಗಿರುವುದು ನಿಜಕ್ಕೂ ನಮ್ಮಗೆ ಹೆಮ್ಮೆಯ ವಿಷಯ. ದೇಶದ ಪ್ರಸಿದ್ಧ ಮಹಿಳೆಯರಾದ ಕಲ್ಪನಾ ಚಾವ್ಲಾ, ಮದರ್ ತೆರೇಸಾ, ಸರೋಜಿ ನಾಯ್ಡು, ಸಾವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಅರುಣಿಮಾ ಸೀನಾ ಹಾಗೂ ಲತಾ ಮಂಗೇಶ್ಕರ್ ಮುಂತಾದವರು ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ನೃತ್ಯ, ಚಲನಚಿತ್ರ, ರಾಜಕೀಯ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವುದು ನಿಜಕ್ಕೂ ವಿಶೇಷವಾಗಿದೆ. ಆದ್ದರಿಂದ ಇಂದಿನ ಹೆಣ್ಣು ಮಕ್ಕಳು ಅವರ ಹಾಗೆ ಅದ್ಭುತ ಸಾಧನೆಗಳನ್ನು ಮಾಡಬೇಕೆಂದರು.

ಪ್ರಾಂಶುಪಾಲ ಡಾ.ಸೂರ್ಯಕಾಂತ ಚಿದ್ರೆ, ಐಕ್ಯೂಎಸಿ ಸಂಯೋಜನಾಧಿಕಾರಿ ಡಾ.ಜಯಶೀಲಾ ಮುಖ್ಯ ಅತಿಥಿಗಳಾಗಿ, ಜ್ಯೋತಿ ಸೂರ್ಯಕಾಂತ ಅಲ್ಮಾಜೆ, ರಾಜಶ್ರೀ, ಪ್ರಾಧ್ಯಾಪಕರಾದ ವೇದಪ್ರಕಾಶ ಆರ್ಯ, ಡಾ.ಸಂಜೀವಕುಮಾರ ತಾಂದಳೆ, ಮಹೇಶಕುಮಾರ ಆರ್, ಸಚ್ಚಿದಾನಂದ ರುಮ್ಮಾ ದೈಹಿಕ ಶಿಕ್ಷಣ ನಿರ್ದೇಶಕಿ ಊರ್ವಶಿ ಕೊಡಲಿ, ಉಪನ್ಯಾಸಕರಾದ ಡಾ.ದಯಾನಂದ್ ಬಾವುಗೆ, ಬೋಧಕೇತರ ಸಿಬ್ಬಂದಿಗಳು ಹಾಗೂ ಅತಿಥಿ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.