ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಸಂತೋಷ್ ಹೆಗ್ಗಡೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.16:- ಹಣ ಸಂಪಾದಿಸುವ ಭರದಲ್ಲಿ ಸಾರ್ವಜನಿಕರನ್ನು ಮನಬಂದಂತೆ ದೋಚುವ ಪ್ರವೃತ್ತಿಯುಳ್ಳವರಿಂದ ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್‍ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬೆಡದಹಳ್ಳಿ ಗ್ರಾಮದ ಬಳಿ ಇರುವ ಶ್ರೀಕ್ಷೇತ್ರ ಶ್ರೀಪಂಚಭೂತೇಶ್ವರ ಮಠದಲ್ಲಿ ಅಮವಾಸ್ಯೆಯ ಅಂಗವಾಗಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲಿ ನೋಡಿದರೂ, ಯಾವ ಇಲಾಖೆಯಲ್ಲಿ ನೋಡಿದರೂ ಭ್ರಷ್ಟಾಚಾರ ಎಂಬುದು ತುಂಬಿ ತುಳುಕುತ್ತಿದೆ. ಇಡೀ ವ್ಯವಸ್ಥೆಯೇ ಹೀಗಾದರೆ ಇದಕ್ಕೆ ನ್ಯಾಯ ಒದಗಿಸುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನಮ್ಮನ್ನಾಳುವ ಜನಪ್ರತಿನಿಧಿಗಳು, ಸುಶಿಕ್ಷಿತರು, ಸರ್ಕಾರಿ ಅಧಿಕಾರಿಗಳು ನಮಗೆ ಮಾದರಿಯಾಗಬೇಕು, ಆಗ ಮಾತ್ರ ಸಮಾಜದಲ್ಲಿನ ಅಸಮತೋಲನ ನಿರ್ಮೂಲನೆ ಆಗಲಿದೆ. ಯಾರಲ್ಲಿ ಹಣದ ಮೋಹ ಹೆಚ್ಚಾಗಿರುತ್ತದೆಯೋ ಅವರು ಎಂದಿಗೂ ಸಮಾಜವನ್ನು ಸರಿದಾರಿಗೆ ತರಲಾರರು. ಈ ಕಾರಣದಿಂದಲೇ ಭ್ರಷ್ಟಾಚಾರ ಎಂಬುದು ಎಲ್ಲೆಡೆ ವ್ಯಾಪಿಸಿದೆ. ಇದಕ್ಕೆ ಒಂದು ದಿನದ, ಒಂದು ತಿಂಗಳ ಕಾಲ ನಿಗಧಿ ಸಲ್ಲದು ಮಾನವರ ಹೃದಯಂತರಾಳದಿಂದ ನಾನು ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸಲು ಶ್ರಮಿಸುತ್ತೇನೆ ಎಂಬ ಭಾವನೆ ಬರಬೇಕು ಆಗ ಮಾತ್ರ ಸಮಾಜ ಹಂತಹಂತವಾಗಿ ಸುಧಾರಿಸಲಿದೆ.
ಹಿಂದೆ ನಾಗರೀಕ ಸಮಾಜದಲ್ಲಿ ಹೆಚ್ಚು ಓದಿದವರಿಗೆ, ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಬೆಲೆ ಇತ್ತು ಆದರೆ ಇಂದು ಜೈಲಿಗೆ ಹೋಗಿ ಬಂದವರನ್ನು ಹೂಮಾಲೆ ಹಾಕಿ ಸ್ವಾಗತಿಸಿ ಅವರನ್ನು ಮೆರವಣಿಗೆ ಮಾಡುವ ಮೂಲಕ ಅವರನ್ನು ಅನುಸರಿಸುತ್ತಿರುವ ಕ್ರಮ ಖಂಡನೀಯ.
ಮಾನವರಾದ ನಾವು ಮೊದಲು ಮಾನವತೆಯನ್ನು ಬೆಳೆಸಿಕೊಂಡು ಇರುವುದರಲ್ಲಿ ತೃಪ್ತಿಪಟ್ಟುಕೊಳ್ಳುವ ಗುಣವನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ನಮ್ಮ ಜೀವನದ ಉಸಿರಾಗಬೇಕು. ಯುವಜನರು ಹಾಗೂ ವಿದ್ಯಾರ್ಥಿಗಳು ಅನ್ಯಾಯ ಅಕ್ರಮಗಳು ಹಾಗೂ ಭ್ರಷ್ಠಾಚಾರದ ನಿರ್ಮೂಲನೆಗಾಗಿ ಬೀದಿಗಿಳಿದು ಹೋರಾಟ ನಡೆಸುವ ಮನೋಭಾವನೆ ಹಾಗೂ ಧೈರ್ಯವನ್ನು ಬೆಳೆಸಿಕೊಂಡು ನಮ್ಮ ಕಣ್ಣೆದುರಿನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡುವ ಧೈರ್ಯವನ್ನು ಬೆಳೆಸಿಕೊಂಡು ಮುನ್ನಡೆದರೆ ಮಾತ್ರ ಹಾದಿ ತಪ್ಪುತ್ತಿರುವ ಅಧಿಕಾರಿಗಳು ಸೇರಿದಂತೆ ಇಡೀ ಸಮಾಜವನ್ನೇ ಸರಿ ದಾರಿಯಲ್ಲಿ ತರಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ದೇವರೂರು ಮಾನವಧರ್ಮ ಪೀಠದ ಜಗದ್ಗುರುಗಳಾದ ಡಾ.ಶ್ರೀ ಮಾದೇಶ್‍ಗುರೂಜಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ.ರುದ್ರಮುನಿ ಸ್ವಾಮೀಜಿ, ಆರ್.ಟಿ.ಐ ಕಾರ್ಯಕರ್ತ ಕುಮಾರಸ್ವಾಮಿ, ರೈತಮುಖಂಡ ಬಿ.ಬಾಚಹಳ್ಳಿ ಪ್ರಸನ್ನ, ಕಾಡುಮೆಣಸಚಂದ್ರು ಸೇರಿದಂತೆ ಶಾಲಾ ಮಕ್ಕಳು ಸಾರ್ವಜನಿಕರು ಹಾಜರಿದ್ದರು.